ಕಾಸರಗೋಡು: ಚಂದ್ರಗಿರಿ ಜಂಕ್ಷನ್‍ನಿಂದ ಕೆಎಸ್‍ಟಿಪಿ ರಸ್ತೆಯಲ್ಲಿ ಕೊನೆಗೂ ದುರಸ್ತಿಕಾರ್ಯ ಆರಂಭಿಸಲಾಗಿದೆ. ಬೃಹತ್ ಹೊಂಡಗಳೆದ್ದು, ವಾಹನ ಚಾಲಕರು ಮತ್ತು ಪ್ರಯಾಣಿಕರ ಪಾಲಿಗೆ ಕಂಟಕವಾಗಿದ್ದ ಪ್ರಸಕ್ತ ರಸ್ತೆಯನ್ನು ದುರಸ್ತಿ ನಡೆಸುವಂತೆ ಮಾಡಿಕೊಂಡ ಮನವಿಗೆ ಕೊನೆಗೂ ಇಲಾಖೆ ಸ್ಪಂದಿಸಿದ್ದು, ರಸ್ತೆ ಮುಚ್ಚಿ ಕಾಮಗಾರಿ ಆರಂಭಿಸಲಾಗಿದೆ.
ದೊಡ್ಡ ಹೊಂಡಗಳಿರುವ ಪ್ರದೇಶದಲ್ಲಿ ಅಧಿಕಾರಿಗಳೇ ಕೆಲವೊಂದು ಕಡೆ ಅಪಾಯಕಾರಿ ಸೂಚನಾಫಲಕ ಅಳವಡಿಸಿದ್ದರೂ, ರಾತ್ರಿ ಕಾಲದಲ್ಲಿ ವಾಹನಚಾಲಕರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸುವ ಸ್ಥಿತಿಯಲ್ಲಿತ್ತು. ಎರಡು ತಿಂಗಳ ಹಿಂದೆಯಷ್ಟೆ ವಿದ್ಯಾರ್ಥಿಗಳಿಬ್ಬರು ಸಂಚರಿಸುತ್ತಿದ್ದ ಬೈಕ್ ರಸ್ತೆ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟು, ಈಕೆ ಸ್ನೇಹಿತ ಗಂಭೀರ ಗಾಯಗೊಂಡ ಘಟನೆಯೂ ನಡೆದಿತ್ತು. ಘಟನೆಯ ನಂತರ ಅಧಿಕಾರಿಗಳು ಎಚ್ಚೆತ್ತು ಹೊಂಡಗಳಿಗೆ ತೇಪೆಹಚ್ಚುವ ಕಾರ್ಯ ನಡೆಸಿದ್ದರೂ, ಮಳೆಗಾಲ ಆರಂಭಗೊಂಡು ತಿಂಗಳು ದಾಟುತ್ತಿದಂತೆ ಮತ್ತೆ ಬೃಹತ್ ಹೊಂಡಗಳು ಕಾಣಿಸಿಕೊಂಡಿತ್ತು. ವಾಹನ ಸಂಚಾರ ದುಸ್ತರವಾಗುತ್ತಿರುವ ಬಗ್ಗೆ 'ವಿಜಯವಾಣಿ'ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಅವೈಜ್ಞಾನಿಕ ಮತ್ತು ಸಮರ್ಪಕವಲ್ಲದ ರೀತಿಯಲ್ಲಿ ಡಾಂಬರೀಕರಣ ಹಾಗೂ ಇಂಟರ್‍ಲಾಕ್ ಅಳವಡಿಸುವುದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿದೆ. ಪ್ರಸಕ್ತ ಹಳೇ ಡಾಂಬರೀಕರಣ ಸಂಪೂರ್ಣ ಅಗೆದು ತೆಗೆದಯ, ಕಾಂಕ್ರೀಟ್ ಮಿಶ್ರಣ ತುಂಬಿಸಿ, ಇಂಟರ್‍ಲಕ್ ಹಾಗೂ ಕಾಂಕ್ರೀಟೀಕರಣ ನಡೆಸುವ ಕಾಮಗಾರಿ ನಡೆದು ಬರುತ್ತಿದೆ. ದುರಸ್ತಿಕಾಮಗಾರಿಗಾಗಿ ಪ್ರೆಸ್‍ಕ್ಲಬ್ ಜಂಕ್ಷನ್‍ನಿಂದ ಚಂದ್ರಗಿರಿ ಸಏತುವೆ ವರೆಗೆ ವಾಹನ ಸಂಚಾರವನ್ನು ಸೆ. 28ರ ವರೆಗೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದ ಸೇತುವೆ ವರೆಗೆ ಮಾತ್ರ ಬಸ್ ಸೇವೆ ನಡೆಸುತ್ತಿದ್ದು, ಅಲ್ಲಿಂದ ಪ್ರಯಾಣಿಕರು ಕಾಲ್ನಡಿಗೆ ಮೂಲಕ ತಲುಪಬೇಕಾಗಿದೆ.