ಕಾಸರಗೋಡು: ರಾಜ್ಯದ ಸಾರ್ವಜನಿಕ ಸಂಸ್ಥೆಗಳಲ್ಲಿ ಕೇರಳ ತೋಟಗಾರಿಕಾ ನಿಗಮ(ಪಿ.ಸಿ.ಕೆ)ದ ಕಾಸರಗೋಡು ಗೇರುತೋಟ ಎಸ್ಟೇಟ್‍ನ ಮುಳಿಯಾರ್‍ನಲ್ಲಿ ಗೇರು ಹಣ್ಣಿನ ಸಂಸ್ಕರಣಾ ಘಟಕ ತಲೆಯೆತ್ತುತ್ತಿದೆ. ವ್ಯಾಪಕವಾಗಿ ಕೊಳೆತು ಹಾಳಾಗುತ್ತಿರುವ ಗೇರು ಹಣ್ಣಿನಿಂದ ಆರೋಗ್ಯವಂತ ಪೇಯ ನಿರ್ಮಾಣಕ್ಕೆ ಪಿಸಿಕೆ ಮುಂದಾಗಿದೆ. ಗೇರು ಹಣ್ಣಿನ ರಸ ತೆಗೆದು, ಕಾರ್ಬೋನೇಟೆಡ್ ಪಾನೀಯ ತಯಾರಿಸುವುದು ಪಿಸಿಕೆ ಗುರಿಯಾಗಿದೆ.
ಕಾಸರಗೋಡು-ಮುಳ್ಳೇರಿಯ ರಸ್ತೆಯ ಮುಳಿಯಾರಿನ ಪಿಸಿಕೆ ಎಸ್ಟೇಟ್ ಸನಿಹ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕಟ್ಟಡದಲ್ಲಿ ಗೇರುಹಣ್ಣಿನ ಪಾನೀಯ ತಯಾರಿ ಘಟಕ ಕಾರ್ಯಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿದ್ದ ತೋಟಗಾರಿಕಾ ನಿಗಮದ ಗೇರು ತೋಟಗಳಲ್ಲಿ ಕ್ರಮೇಣ ಗೇರು ಕೃಷಿ ಕಡಿಮೆಯಾಗುತ್ತಾ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ನಿಗಮ ಗೇರು ಸಂಸ್ಕರಿತ ಉತ್ಪನ್ನಗಳ ತಯಾರಿಗೆ ಆದ್ಯತೆ ನೀಡುತ್ತಿದ್ದು, ಇದರಲ್ಲಿ ಗೇರು ಹಣ್ಣಿನಿಂದ ಪಾನೀಯ ತಯಾರಿಸುವ ಘಟಕವೂ ಒಳಗೊಂಡಿದೆ. ಗೇರು ತೋಟಗಳಲ್ಲಿ ರಬ್ಬರ್ ಕೃಷಿ, ಜಾನುವಾರು ಸಾಕಣಿಕೆಯಲ್ಲೂ ನಿಗಮ ತೊಡಗಿಸಿಕೊಂಡಿದೆ. ಪಿಸಿಕೆ ವತಿಯಿಂದ ಗೇರು ಹಣ್ಣಿನ ಪಾನೀಯ ಸಂಸ್ಕರಣಾ ಘಟಕ ತಲೆಯೆತ್ತುವ ಮೂಲಕ ಜಿಲ್ಲೆಯ ಗೇರು ಕೃಷಿಕರಲ್ಲೂ ಮಂದಹಾಸಕ್ಕೆ ಕಾರಣವಾಗಿದೆ. ಪಿಸಿಕೆ ತೋಟಗಳಿಂದ ಅಲ್ಲದೆ ಹೊರಗಿನಿಂದಲೂ ಗೇರು ಹಣ್ಣು ಖರೀದಿಸಲು ಪಿಸಿಕೆ ಮುಂದಾಗಿದ್ದು, ಇದರಿಂದ ಗೇರು ಬೆಳೆಗಾರರಿಗೂ ಆದಾಯ ಹೆಚ್ಚುವ ಸಾಧ್ಯತೆಯಿದೆ.
ಇಂದು ಉದ್ಘಾಟನೆ:
ಗೇರು ಹಣ್ಣಿನ ಸಂಸ್ಕರಣಾ ಘಟಕವನ್ನು ಸೆ. 2ರಂದು ಬೆಳಗ್ಗೆ 10.30ಕ್ಕೆ ಕೇರಳ ಕೃಷಿ ಖಾತೆ ಸಚಿವ ಪಿ. ಪ್ರಸಾದ್ ಉದ್ಘಾಟಿಸುವರು. ಶಾಸಕ ಸಿ.ಎಚ್ ಕುಞಂಬು ಅಧ್ಯಕ್ಷತೆ ವಹಿಸುವರು. ಸಂದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30ರಿಂದ ಸಂವಾದ ಕಾರ್ಯಕ್ರಮ ನಡೆಯುವುದು. 'ಗೇರು ಕೃಷಿ-ಸಾಧ್ಯತೆಗಳು ಮತ್ತು ಸಮಸ್ಯೆಗಳು' ಎಂಬ ವಿಚಾರದಲ್ಲಿ ಪಿಸಿಕೆ ಎಂಡಿ ಡಾ. ಜೇಮ್ಸ್ ಜೇಕಬ್ ವಿಷಯ ಮಂಡಿಸುವರು. ಪಿಸಿಕೆ ಅಧ್ಯಕ್ಷ ಓ.ಪಿ ಅಬ್ದುಲ್ ಸಲಾಂ ಪ್ರಾಸ್ತಾವಿಕ ಮಾತುಗಳನ್ನಾಡುವರು.