ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಆಚರಣೆಯೊಂದಿಗೆ ಇಲ್ಲಿನ ಅಡುಗೆ ನಿರ್ವಾಹಕಿ ಕಲ್ಯಾಣಿ ಅವರಿಗೆ ಗೌರವಾರ್ಪಣೆ ನಡೆಯಿತು. ಪ್ರಸ್ತುತ ಮುಳಿಂಜ ವಿದ್ಯಾ ಸಂಸ್ಥೆಯಲ್ಲಿ 32 ವರ್ಷಗಳಿಂದೀಚೆಗೆ ಶಾಲಾ ಮಕ್ಕಳಿಗೆ ಸ್ವಾಧಿಷ್ಟ ಅಡುಗೆ ತಯಾರಿಸಿ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ಮತ್ತು ಶಾಲೆಯ ಹಾಗು ಊರಿನವರ ಹಿರಿಯಕ್ಕನಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಯಾಣಿಯಕ್ಕ ಅವರು ಅನಾರೋಗ್ಯ ನಿಮಿತ್ತ ತನ್ನ ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ. ಅವರನ್ನು ಶಾಲಾ ಶಿಕ್ಷಕ-ರಕ್ಷಕ ಬಳಗದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಶುಕ್ರವಾರ ನಡೆದ ಶಾಲಾ ಓಣಂ ದಿನಾಚರಣೆಯಲ್ಲಿ ಶಾಲು ಹೊದಿಸಿ ಫಲಪುಷ್ಪ ಹಾಗು ನಗದನ್ನು ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ದೀಪ ಬೆಳಗಿ ಓಣಂ ದಿನಾಚರಣೆಯನ್ನು ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿ ಯ ಬಿ.ಪಿ.ಒ ಜಾಯ್ ಓಣಂ ದಿನಾಚರಣೆಯ ಮಹತ್ವ ತಿಳಿಸಿದರು. ಶಾಲಾ ಅಭಿವೃದ್ದಿ ಸಮಿತಿ ಸದಸ್ಯ ಫಿರೋಜ್ ಶುಭಹಾರೈಸಿದರು. ಎಸ್.ಆರ್.ಜಿ ಕನ್ವೀನರ್ ಫಾತಿಮತ್ ಫಝೀನ ಓಣಂ ಹಬ್ಬದ ಐತಿಹ್ಯವನ್ನು ತಿಳಿಸಿಕೊಟ್ಟರು. ಶಾಲಾ ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ ಸ್ವಾಗತಿಸಿ, ಕಾವ್ಯಾಂಜಲಿ ಪ್ರತಾಪನಗರ ವಂದಿಸಿದರು. ಶಿಕ್ಷಕಿ ಅನಿತಾ ಪ್ರತಾಪನಗರ ಅವರ ನೇತೃತ್ವದಲ್ಲಿ ಪೂಕಳಂ ಮಹಾಬಲಿ ಹುಲಿಕುಣಿತ ಇತ್ಯಾದಿಗಳು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮನೋರಂಜನಾ ಕಾರ್ಯಕ್ರಮವು ನಡೆಸಲಾಯಿತು. ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷೆ ಫಾತಿಮತ್ ರುಬೀನ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧಕ್ಷೆ ಇರ್ಫಾನ ಇಕ್ಬಾಲ್ ಅವರು ಓಣಂ ಔತಣಕ್ಕೆ ಆಗಮಿಸಿ ನಿವೃತ್ತಿ ಹೊಂದುತ್ತಿರುವ ಕಲ್ಯಾಣಿಯಕ್ಕನಿಗೆ ಶುಭ ಹಾರೈಸಿದರು.