ನವದೆಹಲಿ: ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ತೆಗೆದುಕೊಂಡ ನಿಲುವನ್ನು ಪ್ರಶ್ನಿಸಿದ್ದ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಅವರು ಇಂದು (ಗುರುವಾರ) ರಾಜೀನಾಮೆ ನೀಡಿದ್ದಾರೆ.
ಜವಾಹರ್ ಸಿರ್ಕಾರ್ ಅವರ ರಾಜೀನಾಮೆ ಪತ್ರವನ್ನು ರಾಜ್ಯಸಭಾಧ್ಯಕ್ಷ ಜಗದೀಶ್ ಧನಕರ್ ಅವರು ಅಂಗೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆರ್.ಜಿ.ಕರ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ಅಧ್ಯಕ್ಷೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ತೆಗೆದುಕೊಂಡ ನಿಲುವನ್ನು ಪ್ರಶ್ನಿಸಿದ್ದ ಸಿರ್ಕಾರ್, ಸುದೀರ್ಘ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ ನೀವು ತೆಗದುಕೊಂಡ ನಿಲುವು ತಡವಾಗಿದೆ ಎಂದು ತಿಳಿಸಿದ್ದರು.
ಇದರ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿರ್ಕಾರ್, ರಾಜಕೀಯದಿಂದ ದೂರ ಉಳಿಯುವುದಾಗಿಯೂ ಹೇಳಿದ್ದಾರೆ.
ಸಿರ್ಕಾರ್ ರಾಜೀನಾಮೆ ಬಳಿಕ ಪ್ರಸ್ತುತ ರಾಜ್ಯಸಭೆಯಲ್ಲಿ ಟಿಎಂಸಿ ಸದಸ್ಯರ ಸಂಖ್ಯೆ 12ಕ್ಕೆ ಇಳಿದಿದೆ.