ಮಧೂರು: ಜಿಲ್ಲೆಯ ಅಚ್ಚಗನ್ನಡ ಪ್ರದೇಶಗಳಲ್ಲೂ ಕನ್ನಡ ಭಾಷೆ ಬಳಕೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ವ್ಯಾಪಕ ನಿರ್ಲಕ್ಷ್ಯ ವಹಿಸುತ್ತಿದ್ದು, ಇದಕ್ಕೆ ಮಧೂರು ಗ್ರಾಮ ಪಂಚಾಯಿತಿಯ ಕೊಲ್ಯ ರಸ್ತೆ ಸನಿಹ ಲೋಕೋಪಯೋಗಿ ಇಲಾಖೆ ಸ್ಥಾಪಿಸಿರು ನಾಮಫಲಕವೊಂದು ಸ್ಪಷ್ಟ ನಿದರ್ಶನವಾಗಿದೆ.
ಜಿಲ್ಲೆಯಲ್ಲಿ ಊರಿನ ಹೆಸರನ್ನು ಅಪಭ್ರಂಶಗೊಳಿಸುವ ಮೂಲಕ ಮಲಯಾಳೀಕರಣಗೊಳಿಸುವ ಹಿಡನ್ ಅಜೆಂಡಾ ಕಳೆದ ಕೆಲವು ವರ್ಷಗಳಿಂದ ನಡೆದುಬರುತ್ತಿದ್ದು, ಇದರೊಂದಿಗೆ ಸೇತುವೆ ಸನಿಹ ಅಪಘಾತ ವಲಯದಲ್ಲಿ ಚಾಲಕರನ್ನು ಎಚ್ಚರಿಸುವ ಬಗ್ಗೆ ಕನ್ನಡದಲ್ಲಿ ಅಳವಡಿಸಿದ ನಾಮಫಲಕವೊಂದು ಕನ್ನಡ ಭಾಷೆಯನ್ನು ಅಪಮಾನಿಸುವಂತಿದೆ. ಅದೂ ಕನ್ನಡಿಗರೇ ಹೆಚ್ಚಾಗಿರುವ ಮಧೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ನಾಮಫಲಕ ಅಳವಡಿಸಿ ವರ್ಷಗಳೆ ಸಂದಿದ್ದು, ಕನ್ನಡ ಅಭಿಮಾನಿಯೊಬ್ಬರ ಗಮನಕ್ಕೆ ಬಂದ ಈ ಫಲಕವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕನ್ನಡದ ಅವಗಣನೆಗೆ ಸಾಕ್ಷಿಯಾಗಿ ನಾಮಫಲಕ ರಾರಾಜಿಸುತ್ತಿದ್ದು, ಅಪಾಯ ಸೂಚಕ ಫಲಕ, ಕನ್ನಡ ಭಾಷೆಗೆ ಸಂಚಕಾರ ತಂದೊಡ್ಡುವ ರೀತಿಯಲ್ಲಿದೆ.
'ಜಾಗ್ರತಾ ಮುನ್ಸೂಚನೆ' 'ಅಪಘಾತ ವಲಯ' ಎಂಬ ಪದಗಳನ್ನು ಮಲಯಾಳದಿಂದ ಕನ್ನಡಕ್ಕೆ ಭಾಷಾಂತರಿಸುವ ಭರದಲ್ಲಿ ನಾಮಫಲಕದಲ್ಲಿ ಮಲಯಾಳ ಪದಗಳೇ ತುಂಬಿಕೊಂಡಿದೆ. ಮಧೂರು ಗ್ರಾಮ ಪಂಚಾಯಿತಿಯನ್ನು 'ಮಧೂರು ಗ್ರಾಮ ಪಂಜಾಯತ್'ಎಂದು ನಮೂದಿಸಲಾಗಿದೆ. ಕಂಪ್ಯೂಟರ್ ಯುಗದಲ್ಲಿ ಮಲಯಾಳದ ಭಾಷಾಂತರ ಪ್ರಕ್ರಿಯೆಯನ್ನು ಗೂಗಲ್ ಟ್ರಾನ್ಸ್‍ಲೇಟ್ ಮೂಲಕ ನಿರ್ವಹಿಸುವಾಗ ಅವಾಂತರಗಳೇ ಸೃಷ್ಟಿಯಾಗುತ್ತಿದೆ. ಗೂಗಲ್ ಮೂಲಕ ಭಾಷಾಂತರಿಸಿದರೂ, ಇದನ್ನು ಕನ್ನಡ ಬಲ್ಲವರೊಂದಿಗೆ ಸಮಾಲೋಚಿಸಿ ಸರಿಪಡಿಸುವ ಗೋಜಿಗೆ ಯಾವುದೇ ಇಲಾಖೆ ಅಧಿಕಾರಿಗಳೂ ತಯಾರಾಗುತ್ತಿಲ್ಲ. ಇನ್ನು ಕೆಲವು ಕನ್ನಡ ಬಲ್ಲ ಅಧಿಕಾರಿಗಳು ಸರಿಪಡಿಸಿದರೂ, ಅದರಲ್ಲೂ ಮಲಯಾಳ ಪದಗಳೇ ತುಂಬಿಕೊಂಡಿರುತ್ತದೆ.
ಬೋರ್ಡ್ ಅಳವಡಿಸಿದವರ್ಯಾರು?....:
ಮಧೂರು ಸನಿಹದ ಸೇತುವೆ ಬಳಿ ಮಲಯಾಳ ಮತ್ತು ಕನ್ನಡದಲ್ಲಿ ನಾಮಫಲಕ ಅಳವಡಿಸಲಗಿದ್ದು, ಮಲಯಾಳದಲ್ಲಿ ಸಮರ್ಪಕವಾಗಿದ್ದರೂ, ಕನ್ನಡದಲ್ಲಿ ಪದಗಳನ್ನು ಅಪಭ್ರಂಶಗೊಳಿಸಲಾಗಿದೆ. ಇನ್ನು ಈ ನಾಮಫಲಕ ಅಳವಡಿಸಿದವರ್ಯಾರು ಎಂಬ ಬಗ್ಗೆ ಸ್ಥಳೀಯಾಡಳಿತ ಆಗಲಿ ಲೋಕೋಪಯೋಗಿ ಇಲಾಖೆಗಾಗಲಿ ಮಾಹಿತಿಯಿಲ್ಲ. ಇನ್ನು ಲೋಕೋಪಯೋಗಿ ಇಲಾಖೆ ಅಳವಡಿಸುವ ಬಹುತೇಕ ಸೂಚನಾ ಫಲಕ, ನಾಮಫಲಕಗಳು ಅಪಭ್ರಂಶದಿಂದ ಅಥವಾ ಜಾಗದ ಹೆಸರನ್ನೇ ಅಸಮರ್ಪಕವಾಗಿ ನಮೂದಿಸಲಾಗುತ್ತಿದೆ ಎಂಬ ದೂರು ವ್ಯಾಪಕಗೊಂಡಿದೆ.