ಕಾಸರಗೋಡು: ಆಲಪ್ಪುಳದಲ್ಲಿ ವೃದ್ಧೆಯನ್ನು ಕೊಲೆಗೈದು ಹೂತುಹಾಕಿದ ಪ್ರಕರಣದ ಆರೋಪಿಗಳೆಂದು ಸಂಶಯಿಸಲಾಗಿರುವ ಉಡುಪಿಯ ಮಹಿಳೆ ಹಾಗೂ ಈಕೆಯ ಪತಿಯನ್ನು ಆಲಪ್ಪುಳ ಠಾಣೆ ಪೊಲೀಸರು ಮಣಿಪಾಲದಿಂದ ಬಂಧಿಸಿದ್ದಾರೆ. ಎರ್ನಾಕುಳಂ ಕಲವೂರ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮ್ಯಾಥ್ಯೂಸ್ ಯಾನೆ ನಿತಿನ್ ಹಾಗೂ ಈತನ ಪತ್ನಿ, ಉಡುಪಿ ನಿವಾಸಿ ಶರ್ಮಿಳಾ ಬಂಧಿತರು. ಇವರನ್ನು ಪೊಲೀಸರು ಆಲಪ್ಪುಳಕ್ಕೆ ಕರೆದೊಯ್ದಿದ್ದಾರೆ.
ಎರ್ನಾಕುಳಂ ಸೌತ್ ರೈಲ್ವೆ ನಿಲ್ದಾಣ ಸನಿಹದ ಕರಿತ್ತಲ ರಸ್ತೆ ಶಿವಕೃಪಾದ ಸುಭದ್ರಾ(78)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ. ಸುಭದ್ರಾ ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ಇವರ ಪುತ್ರ ರಾಧಾಕೃಷ್ಣನ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಎರ್ನಾಕುಳಂ ಕವಲೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉಡುಪಿ ನಿವಾಸಿ ಶರ್ಮಿಳಾ ಹಾಗೂ ಈಕೆ ಪತಿ ಮ್ಯಾಥ್ಯೂಸ್ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿತ್ತು. ಸುಭದ್ರಾ ಅವರನ್ನು ಕೊಲೆಗೈದು ಚಿನ್ನಾಭರಣ ದೋಚಿ ದಂಪತಿ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಮಧ್ಯೆ ಆರೋಪಿಗಳು ಕಾಸರಗೋಡು, ದ.ಕ ಅಥವಾ ಉಡುಪಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸಂಶಯದಿಂದ ಪೊಲೀಸರು ಹುಡುಕಾಟದಲ್ಲಿ ತೊಡಗಿರುವ ಮಧ್ಯೆ ದಂಪತಿ ಮಣಿಪಾಲದಲ್ಲಿ ಪತ್ತೆಯಾಗಿದ್ದರು.