ಇಂದೋರ್: ಪಿಕ್‌ನಿಕ್‌ಗೆ ತೆರಳಿದ್ದ ಇಬ್ಬರು ಸೇನಾಧಿಕಾರಿಗಳಿಗೆ ಥಳಿಸಿ, ಅವರ ಇಬ್ಬರು ಸ್ನೇಹಿತೆಯರ ಪೈಕಿ ಒಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಡಕಾಯತಿಗಾಗಿ ಬಂದಿದ್ದ ಆರು ಮಂದಿ ಈ ಕೃತ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
'ಮಹು ಕಂಟೋನ್‌ಮೆಂಟ್‌ನಲ್ಲಿರುವ ಇನ್‌ಫೆಂಟ್ರಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ 23 ಹಾಗೂ 24 ವರ್ಷದ ಸೇನಾಧಿಕಾರಿಗಳು ಹಾಗೂ ಅವರ ಇಬ್ಬರು ಸ್ನೇಹಿತೆಯರು ಮಹು ಪಟ್ಟಣದಲ್ಲಿರುವ ಜಾಮ್ ಗೇಟ್ ಬಳಿ ಪಿಕ್‌ನಿಕ್‌ಗೆ ತೆರಳಿದಾಗ ಬುಧವಾರ ನಸುಕಿನ 2 ಗಂಟೆಗೆ ಈ ಘಟನೆ ನಡೆದಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ಹಿತಿಕಾ ವಸಾಲ್ ಗುರುವಾರ ಹೇಳಿದರು.
'ಇಬ್ಬರನ್ನು ಬಂಧಿಸಿದ್ದು ಉಳಿದ ನಾಲ್ಕು ಮಂದಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳು ಅಲ್ಲೇ ಹತ್ತಿರದ ಗ್ರಾಮದವರು. ಇವರಲ್ಲಿ ಕೆಲವರಿಗೆ ಅಪರಾಧದ ಹಿನ್ನೆಲೆ ಇದೆ. ಇವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೌರ್ಜನ್ಯ, ಡಕಾಯಿತಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದರು.
ಏನಾಯಿತು?ಅರಣ್ಯ ಪ್ರದೇಶದಲ್ಲಿ ಸೇನಾಧಿಕಾರಿಗಳು ಹಾಗೂ ಅವರ ಸ್ನೇಹಿತರಿಗೆ ಆರೋಪಿಗಳು ಥಳಿಸಿದ್ದಾರೆ. ನಂತರ, ಒಬ್ಬ ಅಧಿಕಾರಿ ಹಾಗೂ ಒಬ್ಬ ಸ್ನೇಹಿತೆಯನ್ನು ಬಂಧಿ ಮಾಡಿಕೊಂಡು, ಉಳಿದ ಸೇನಾಧಿಕಾರಿ ಹಾಗೂ ಸ್ನೇಹಿತೆಗೆ ₹10 ಲಕ್ಷ ತರುವಂತೆ ಕಳುಹಿಸಿದ್ದಾರೆ. ಅಲ್ಲಿಂದ ಹಣ ತರಲು ಹೊರಟ ಅಧಿಕಾರಿಯು ತನ್ನ ಹಿರಿಯ ಅಧಿಕಾರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ' ಎಂದು ವಿವರಿಸಿದರು.
'ಈ ಬಗ್ಗೆ ಬಂಧನದಲ್ಲಿದ್ದ ಅಧಿಕಾರಿಯು ದೂರು ನೀಡಿದ್ದಾರೆ. ತನ್ನ ಜೊತೆಯಿದ್ದ ನನ್ನ ಸ್ನೇಹಿತೆಯನ್ನು ಆರೋಪಿಗಳು ದೂರ ಎಳೆದುಕೊಂಡು ಹೋದರು. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಮಹಿಳೆಯ ಹೇಳಿಕೆಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಿದೆ' ಎಂದರು.
'ನಮಗೆ ಮಾಹಿತಿ ಸಿಕ್ಕ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದೆವು. ಕಾರುಗಳು ಬರುತ್ತಿದ್ದಂತೆಯೇ ಆರೋಪಿಗಳು ಓಡಿ ಹೋದರು. ನಂತರ ಇಬ್ಬರು ಸೇನಾಧಿಕಾರಿಗಳು ಹಾಗೂ ಅವರ ಸ್ನೇಹಿತೆಯರನ್ನು ಬೆಳಿಗ್ಗೆ 6.30ರ ಸುಮಾರಿಗೆ ವೈದ್ಯಕೀಯ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಸೇನಾಧಿಕಾರಿಗಳ ದೇಹದ ಮೇಲೆ ಗಾಯಗಳಾಗಿವೆ ಹಾಗೂ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯರು ಮಾಹಿತಿ ನೀಡಿದರು' ಎಂದು ಬಡಗೊಂದಾ ಠಾಣೆಯ ಲೊಕೆಂದರ್ ಹಿರೋರೆ ಮಾಹಿತಿ ನೀಡಿದರು.