ತಿರುವನಂತಪುರ: ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿರುವ ಮಲಯಾಳ ನಟ ಜಯಸೂರ್ಯ, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಜಯಸೂರ್ಯ, 'ಸುಳ್ಳು ಆರೋಪಗಳು ನನ್ನ ಮತ್ತು ನನ್ನ ಕುಟುಂಬವನ್ನು ಘಾಸಿಗೊಳಿಸಿವೆ' ಎಂದು ಹೇಳಿದ್ದಾರೆ.
'ವಿದೇಶಕ್ಕೆ ತೆರಳಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಎರಡು ಸುಳ್ಳು ಆರೋಪ ಮಾಡಲಾಗಿದೆ. ಇದರಿಂದ, ಸಹಜವಾಗಿ ನಾನು ಹಾಗೂ ಕುಟುಂಬಸ್ಥರು ಆಘಾತಗೊಂಡಿದ್ದೇವೆ. ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಲು ನಿರ್ಧರಿಸಿದ್ದೇನೆ' ಎಂದು ಫೇಸ್‌ಬುಕ್ ಪುಟದಲ್ಲಿ ಲಗತ್ತಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆಗಸ್ಟ್ 31ರಂದು ತನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ.
'ಆತ್ಮಸಾಕ್ಷಿ ಇಲ್ಲದವರು ಯಾರ ಮೇಲಾದರೂ ಸುಳ್ಳು ಆರೋಪ ಮಾಡಬಹುದು. ಅದು ತುಂಬಾ ಸುಲಭ. ಆದರೆ, ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಷ್ಟೇ ನೋವುಂಟು ಮಾಡುತ್ತದೆ' ಎಂದು ಹೇಳಿದ್ದಾರೆ.
ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಜಯಸೂರ್ಯ ವಿರುದ್ಧ ನಟಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದವು. ಅವರ ವಿರುದ್ಧ ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾದರೆ, ಕರಮಾನಾ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.