ಮಂಜೇಶ್ವರ : ವಯನಾಡು ದುರಂತ ಸಂತ್ರಸ್ತರ ನೆರವಿಗಾಗಿ ಮಂಜೇಶ್ವರ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ಸಾರ್ವಜನಿಕ ವಲಯದಿಂದ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳು ಪಂಚಾಯತ್ ಕಚೇರಿಯಲ್ಲಿ ಕೊಳೆತು ನಾರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಂತ್ರಸ್ತರಿಗೆ ತಲುಪಿಸ ಬೇಕಾದ ಆಹಾರ ಸಾಮಾಗ್ರಿಗಳನ್ನು ಫಲಾನುಭವಿಗಳಿಗೆ ಕಳಿಸಿದೆ ಕಚೇರಿಯಲ್ಲೇ ದಾಸ್ತಾನು ಇಟ್ಟಿರುವುದು ಯಾಕಾಗಿ ಎಂಬ ಪ್ರಶ್ನೆ ಉದ್ಭವಿಸಿದೆ.
ಪಂಚಾಯತ್ ಕಚೇರಿಯಲ್ಲಿ ಸಾಕಷ್ಟು ಆಹಾರ ಸಾಮಗ್ರಿಗಳು ಸಂಗ್ರಹವಾಗಿದ್ದು, ಅವುಗಳನ್ನು ಅಗತ್ಯವಿರುವವರಿಗೆ ತಲುಪಿಸದೇ, ವಸ್ತುಗಳು ಸರಿಯಾಗಿ ಸಂಗ್ರಹಣೆ ಮಾಡದ ಕಾರಣ ಕೊಳೆತು ಹಾಳಾಗಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ನೆರವು ತಲುಪಿಸುವಲ್ಲಿ ಆಡಳಿತ ಸಮಿತಿ ವೈಫಲ್ಯ ಕಂಡಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಿರ್ಲಕ್ಷ್ಯ ಹಾಗೂ ಸೂಕ್ತ ಸಮಯದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ಆಹಾರ ಸಾಮಗ್ರಿಗಳನ್ನು ಯೋಗ್ಯವಾಗಿ ನಿರ್ವಹಿಸದೇ, ಅವು ವ್ಯರ್ಥವಾಗುತ್ತಿರುವುದು ಪಂ. ಅಧಿಕಾರಸ್ಥರ ವೈಪಲ್ಯಕ್ಕೊಂದು ಮೂಕ ಸಾಕ್ಷಿಯಾಗಿರುವುದಾಗಿ ಜನರು ಆಡಿಕೊಳ್ಳುತಿದ್ದಾರೆ. ಅಧಿಕಾರಿಗಳು ಹಾಗೂ ಆಡಳಿತ ಜನಪ್ರತಿನಿಧಿಗಳ ನಿಲ್ರ್ಯಕ್ಷ ವಿರುದ್ಧ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ನಾವು ಆಹಾರ ಸಾಮಾಗ್ರಿ ಸಂಗ್ರಹಿಸಿದ ಸಮಯದಲ್ಲಿ ಈಗ ಕಳಿಸುವುದು ಬೇಡ ಎಂದು ವಯನಾಡು ಜಿಲ್ಲಾಧಿಕಾರಿಯಿಂದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಮ್ಮಿಂದ ವಿಳಂಬವಾಗಿದೆ. ಸಾರ್ವಜನಿಕ ವಲಯದಲ್ಲಿ ಈಗ ಈ ವಿಷಯ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ಮೊದಲು ವಯನಾಡಿಗೆ ಕಳಿಸುವುದಾಗಿ ತಿಳಿಸಿದ್ದಾರೆ.