ನವದೆಹಲಿ: 'ತ್ವರಿತಗತಿಯಲ್ಲಿ ನ್ಯಾಯಒದಗಿಸಲು, ಕೋರ್ಟ್‌ಗಳಲ್ಲಿ ವಿಚಾರಣೆಯನ್ನು 'ಮುಂದೂಡುವ ಸಂಸ್ಕೃತಿ'ಯನ್ನು ಬದಲಿಸಬೇಕಾದ ಅಗತ್ಯವಿದೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಪ್ರತಿಪಾದಿಸಿದರು.
ಜಿಲ್ಲಾ ನ್ಯಾಯಾಂಗದ ಎರಡು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾನುವಾರ ಸಮಾರೋಪ ಭಾಷಣ ಮಾಡಿದ ಅವರು, 'ಕೋರ್ಟ್‌ಗಳಲ್ಲಿ ದಾವೆಗಳು ಬಾಕಿ ಉಳಿದಿರುವುದು ನಮಗೆಲ್ಲರಿಗೂ ಅತಿದೊಡ್ಡ ಸವಾಲಾಗಿದೆ' ಎಂದು ಅಭಿಪ್ರಾಯಪಟ್ಟರು.
ವಿಚಾರಣೆ ಮುಂದೂಡುವ ಸಂಸ್ಕೃತಿ ಬದಲಿಸಲು ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನ್ಯಾಯರಕ್ಷಿಸುವ ಹೊಣೆಗಾರಿಕೆಯೂ ದೇಶದಲ್ಲಿರುವ ಎಲ್ಲ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಮೇಲಿದೆ ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯಿಂದಾಗಿ ಸಾಮಾನ್ಯ ಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದರು. ಈ ಪ್ರವೃತ್ತಿಯನ್ನು 'ಕಪ್ಪುಕೋಟಿನ ಬೇನೆ' ಎಂದೂ ಬಣ್ಣಿಸಿದ ರಾಷ್ಟ್ರಪತಿ, ಈ ಕುರಿತಂತೆ ಅಧ್ಯಯನ ನಡೆಯಬೇಕಾಗಿದೆ ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆಯು ಹೆಚ್ಚುತ್ತಿದೆ. ಇದೊಂದು ಸಂತಸದ ಬೆಳವಣಿಗೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸ ಲಾಂಛನ ಅನಾವರಣ
ನವದೆಹಲಿ: ಸುಪ್ರೀಂ ಕೋರ್ಟ್‌ನ 75ನೇ ವಾರ್ಷಿಕೋತ್ಸವದ ನಿಮಿತ್ತ ಹೊಸ ಧ್ವಜ ಮತ್ತು ಲಾಂಛನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಇಲ್ಲಿ ಅನಾವರಣಗೊಳಿಸಿದರು. ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಬಿಂಬಿಸುವ ಈ ಧ್ವಜ ಮತ್ತು ಲಾಂಛನವು ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯ (ಎನ್‌ಐಎಫ್‌ಟಿ) ಪರಿಕಲ್ಪನೆಯಾಗಿದೆ. ನೂತನ ಧ್ವಜ ಮತ್ತು ಲಾಂಛನವು ಅಶೋಕ ಚಕ್ರ ಸುಪ್ರೀಂ ಕೋರ್ಟ್‌ನ ಕಟ್ಟಡ ಮತ್ತು ಸಂವಿಧಾನದ ಚಿತ್ರವನ್ನು ಒಳಗೊಂಡಿದೆ
ಹೆಚ್ಚಿನ ಮಹಿಳಾಸ್ನೇಹಿ ಸೌಲಭ್ಯ- ಸಿಜೆಐ ಪ್ರತಿಪಾದನೆ
'ಜಿಲ್ಲಾಮಟ್ಟದ ಕೋರ್ಟ್‌ಗಳ ಮೂಲಸೌಕರ್ಯಗಳಲ್ಲಿ ಸುಪ್ರೀಂ ಕೋರ್ಟ್‌ನ ಡಿ.ವೈ.ಚಂದ್ರಚೂಡ್ ಇಲ್ಲಿ ಅಭಿಪ್ರಾಯಪಟ್ಟರು. ಯಾವುದೇ ಪ್ರಶ್ನೆಗೆ ಆಸ್ಪದವಿಲ್ಲದಂತೆ ಈ ಸ್ಥಿತಿ ಬದಲಿಸಬೇಕಿದೆ. ಕೋರ್ಟ್ ಆವರಣದಲ್ಲಿ ವೈದ್ಯಕೀಯ ಸೌಲಭ್ಯ ಇ-ಸೇವಾ ಕೇಂದ್ರಗಳ ಸ್ಥಾಪನೆ ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಒದಗಿಸಬೇಕು. ಇದು ನ್ಯಾಯದಾನದ ಪ್ರಮಾಣವನ್ನು ಉತ್ತಮಪಡಿಸಲಿದೆ ಎಂದು ಹೇಳಿದರು. ಕೋರ್ಟ್‌ಗಳಲ್ಲಿ ಸುರಕ್ಷತೆಯ ವಾತಾವರಣ ಕಲ್ಪಿಸಬೇಕು. ಮುಖ್ಯವಾಗಿ ಮಹಿಳೆಯರು ನಿರ್ಲಕ್ಷಿತ ವರ್ಗ ಅಂಗವಿಕಲರು ಪರಿಶಿಷ್ಟರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಉತ್ತಮ ವಾತಾವರಣ ಕಲ್ಪಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.