ರಾಯ್‌ಪುರ್: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಒಬ್ಬ ಮೃತಪಟ್ಟ ಎಂದು ಪೊಲೀಸರು ತಿಳಿಸಿದರು.
'ಇಲ್ಲಿನ ಚಿಂತಾಗುಫಾ ಪೊಲೀಸ್ ಠಾಣಾ ವ್ಯಾಪ್ತಿಯ ತುಮಲ್‌ಪಾರ ಗ್ರಾಮದ ಶಿಖರದ ದಟ್ಟ ಅರಣ್ಯದಲ್ಲಿ ಬೆಳಿಗ್ಗೆ ನಕ್ಸಲ್ ವಿರೋಧಿ ಪಡೆ ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮೃತಪಟ್ಟರು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ತಿಳಿಸಿದರು.
'ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ, ಬಸ್ತರ್‌ನ ಹೋರಾಟಗಾರರು, ರಾಜ್ಯ ಹಾಗೂ ಜಿಲ್ಲಾ ಪೊಲೀಸರು ಭಾಗಿಯಾಗಿದ್ದರು. ನಿರಂತರ ಗುಂಡಿನ ದಾಳಿ ನಿಂತ ಬಳಿಕ ಸ್ಥಳದಲ್ಲಿ ನಕ್ಸಲರ ಮೃತದೇಹವು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು, ನಕ್ಸಲ್ ಚಳವಳಿಗೆ ಸಂಬಂಧಿಸಿದ ಕರಪತ್ರಗಳು ಪತ್ತೆಯಾದವು' ಎಂದು ಅವರು ವಿವರಿಸಿದರು.
'ಮೃತ ನಕ್ಸಲನ ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ' ಎಂದರು.
154 ನಕ್ಸಲರು ಮೃತ:
'ಈ ವರ್ಷದಲ್ಲಿ ಸುಕ್ಮಾ ಸೇರಿದಂತೆ ರಾಜ್ಯದ ಬಸ್ತಾರ್ ವಿಭಾಗದಲ್ಲಿ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 154 ನಕ್ಸಲರು ಮೃತಪಟ್ಟಿದ್ದಾರೆ' ಎಂದು ಎಸ್‌ಪಿ ಕಿರಣ್ ಚವ್ಹಾಣ್ ತಿಳಿಸಿದರು.
ಎಂಟು ಮಂದಿ ನಕ್ಸಲರ ಬಂಧನ- ಶಸ್ತ್ರಾಸ್ತ್ರ ವಶ: ಸುಕ್ಮಾ ಜಿಲ್ಲೆಯ ಜಗರ್‌ಗುಂಡ ಪೊಲೀಸ್ ಠಾಣಾ ವ್ಯಾಪ್ತಿಯ ಬೈನ್‌ಪಲ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ೆಂಟು ಮಂದಿ ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸ್ಥಳದಲ್ಲಿ ನಕ್ಸಲರು ಬೀಡುಬಿಟ್ಟಿರುವುದನ್ನು ಖಚಿತಪಡಿಸಿಕೊಂಡ ಭದ್ರತಾ ಪಡೆಗಳು ಸುತ್ತುವರಿದು ವಶಕ್ಕೆ ತೆಗೆದುಕೊಂಡವು.
ಬಂಧಿತರ ಪೈಕಿ ಮುಚಕಿ ಪಾಲಾ (33) ಕಮಾಂಡರ್ ಆಗಿದ್ದು, ಆತನ ತಲೆಗೆ ₹1 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ಉಪ ಕಮಾಂಡರ್ ಆಗಿದ್ದ ಮದ್ಕಾಂ ಸನ್ನು (40), ಉಳಿದವರು ಸಂಘಟನೆಯ ಇತರೆ ಸದಸ್ಯರಾಗಿದ್ದಾರೆ ಎಂದು ವಿವರಿಸಿದರು.
ನಕ್ಸಲರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುಕ್ಮಾ ಪೊಲೀಸರು ತಿಳಿಸಿದರು.