ಇಂಫಾಲ್: ಹಿಂಸಾಚಾರಪೀಡಿತ ಮಣಿಪುರದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಆಕಸ್ಮಿಕವಾಗಿ ಮೈತೇಯಿ ಸಮುದಾಯದ ಸೆಕ್ಮೇಯ್ ಪ್ರದೇಶಕ್ಕೆ ಕಾರನ್ನು ಓಡಿಸಿಕೊಂಡು ಬಂದ ಕುಕಿ ಸಮುದಾಯದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕುಕಿ ಸಮುದಾಯದ ಪ್ರಾಬಲ್ಯವಿರುವ ಕಾಂಗ್‌ಪೊಕ್ಪಿ ಜಿಲ್ಲೆಯ ಶರೋನ್ ವೆಂಗ್ ನಿವಾಸಿ ಲಿಮ್ ಲಾಲ್ ಮತೆ ಹತ್ಯೆಗೀಡಾದ ದುರ್ದೈವಿ. ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಆತ ಮಾಜಿ ಸೇನಾಧಿಕಾರಿ ಎಂದು ಕುಕಿ ಸಂಘಟನೆ ಹೇಳಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಕುಕಿ-ಮೈತೇಯಿ ಸಮುದಾಯಗಳ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ ಹಿಂಸಾಚಾರ ತಡೆಗಟ್ಟಲು ಇಂಫಾಲ್ ಕಣಿವೆಯ ಮೈತೇಯಿ ಪ್ರಾಬಲ್ಯವಿರುವ ಜಿಲ್ಲೆಗಳಿಂದ ಕುಕಿ ಸಮುದಾಯದ ಜನ ಓಡಿಹೋಗಿದ್ದರು. ಕುಕಿ ಪ್ರಾಬಲ್ಯದ ಜಿಲ್ಲೆಗಳಿಂದ ಮೈತೇಯಿ ಸಮುದಾಯದ ಜನರು ಕಾಲ್ಕಿತ್ತಿದ್ದರು.
ಅಂದಿನಿಂದ ಎರಡೂ ಪ್ರದೇಶಗಳನ್ನು ಬೇರ್ಪಡಿಸುವ ಸ್ಥಳದಲ್ಲಿ ಸೇನಾಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆದರೂ ಆಗಾಗ್ಗೆ ನಡೆಯುತ್ತಿರುವ ಹತ್ಯಾಕಾಂಡಗಳು ರಾಜ್ಯವನ್ನು ಉದ್ವಿಗ್ನಗೊಳಿಸಿವೆ.
ಸೆಪ್ಟೆಂಬರ್ 1ರಿಂದ ಮತ್ತೆ ಹಿಂಸಾಚಾರಕ್ಕೆ ಇಳಿದಿರುವ ಕುಕಿ ಸಮುದಾಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೈತೇಯಿ ಸಮುದಾಯವು ಇಂಫಾಲ್ ಕಣಿವೆಯಲ್ಲಿ ಬಂದ್ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಿರುವ ಮಣಿಪುರ ಸರ್ಕಾರ, ಇಂದಿನಿಂದ ಆರಂಭವಾಗಬೇಕಿದ್ದ ಮಣಿಪುರ ವಿಶ್ವವಿದ್ಯಾಲಯದ ಪದವಿಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ.
ಕುಕಿ, ಮೈತೇಯಿ ಬಂಡುಕೋರರ ಹತ್ಯೆ
ಶನಿವಾರ ಜಿರಿಬಮ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವಿನ ಗುಂಡಿನ ಕಾಳಗದಲ್ಲಿ ಹತರಾದ ಐದು ಮಂದಿ ಪೈಕಿ ಮೂವರು ಕುಕಿ ಬಂಡುಕೋರ ಸಂಘಟನೆ ಕುಕಿ ಲಿಬರೇಶನ್ ಆರ್ಮಿಗೆ ಸೇರಿದವರು. ಒಬ್ಬರು ಮೈತೇಯಿ ಬಂಡುಕೋರ ಸಂಘಟನೆ ಯುಎನ್‌ಎಲ್‌ಫ್(ಪಿ) ಸಂಘಟನೆಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಕಿ ಬಂಡುಕೋರರು ದಾಳಿಗೆ ರಾಕೆಟ್ ಬಳಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದು, ಕುಕಿ ಸಮುದಾಯ ಆರೋಪವನ್ನು ನಿರಾಕರಿಸಿದೆ.
ಸೆಪ್ಟೆಂಬರ್ 1ರಿಂದ ಪಶ್ಚಿಮ ಇಂಫಾಲ್, ವಿಷ್ಣುಪುರ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ನಾಲ್ಕು ಹಿಂಸಾಚಾರಗಳಲ್ಲಿ 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹೀಗಾಗಿ, ಮಣಿಪುರದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಕನಿಷ್ಠ 135 ಜನರು ಹತ್ಯೆಗೀಡಾಗಿದ್ದು, 60,000ಕ್ಕೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ.