HEALTH TIPS

ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆಯಿಂದ ಸಂತ್ರಸ್ತರಿಗೆ ನ್ಯಾಯ ದೊರೆತಿದೆ: ಬೈಡನ್

 ವಾಷಿಂಗ್ಟನ್‌: ಹಿಜ್ಬುಲ್ಲಾ ಸಂಘಟನೆಯ‌ ನಾಯಕ ಸಯ್ಯದ್‌ ಹಸನ್‌ ನಸ್ರಲ್ಲಾ (64) ಹತ್ಯೆಯಿಂದ ಸಂತ್ರಸ್ತರಿಗೆ ನ್ಯಾಯ ದೊರೆತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಪಾದಿಸಿದ್ದಾರೆ. ಇರಾನ್‌ ಬೆಂಬಲಿತ ಸಂಘಟನೆಗಳ ವಿರುದ್ಧ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ.

ಈ ಸಂಬಂಧ ಶ್ವೇತ ಭವನ ಹೇಳಿಕೆ ಬಿಡುಗಡೆ ಮಾಡಿದ್ದು, ಬೈಡನ್‌ ಅವರು ಗಡಿಯಾಚೆಗಿನ ಸಂಘರ್ಷ ಮತ್ತು ಆಕ್ರಮಣವನ್ನು ನಿಯಂತ್ರಿಸಲು ಮಧ್ಯಪ್ರಾಚ್ಯಕ್ಕೆ ಇನ್ನಷ್ಟು ಪಡೆಗಳನ್ನು ನಿಯೋಜಿಸುವಂತೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರಿಗೆ ನಿರ್ದೇಶಿಸಿದ್ದಾರೆ ಎಂದು ತಿಳಿಸಿದೆ.

ಗಾಜಾ ಮತ್ತು ಲೆಬನಾನ್‌ನಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾರ್ಗವಾಗಿ ಶಮನಗೊಳಿಸುವ ಉದ್ದೇಶವನ್ನು ಅಮೆರಿಕ ಹೊಂದಿದೆ ಎಂದು ಬೈಡನ್‌ ಹೇಳಿದ್ದಾರೆ.

'ಹಸನ್‌ ನಸ್ರಲ್ಲಾ ಮತ್ತು ಆತ ಮುನ್ನಡೆಸುತ್ತಿದ್ದ ಹಿಜ್ಬುಲ್ಲಾ ಸಂಘಟನೆಯು, ಕಳೆದ ನಾಲ್ಕು ದಶಕಗಳಲ್ಲಿ ನೂರಾರು ಅಮೆರಿಕನ್ನರ ಸಾವಿಗೆ ಕಾರಣವಾಗಿತ್ತು. ಇಸ್ರೇಲ್‌ ದಾಳಿಯಿಂದ ಸಂಭವಿಸಿರುವ ಆತನ ಸಾವು, ಅಮೆರಿಕ, ಇಸ್ರೇಲ್‌ ಮತ್ತು ಲೆಬನಾನ್‌ ನಾಗರಿಕರೂ ಸೇರಿದಂತೆ ಸಾವಿರಾರು ಸಂತ್ರಸ್ತರಿಗೆ ದೊರೆತ ನ್ಯಾಯವಾಗಿದೆ' ಎಂದು ಒತ್ತಿ ಹೇಳಿದ್ದಾರೆ.

2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಲು ಹಮಾಸ್‌ಗೆ ನಸ್ರಲ್ಲಾ ಬೆಂಬಲ ನೀಡಿದ್ದ. ಆ ದಾಳಿಯಲ್ಲಿ ಸುಮಾರು 1,200 ಮಂದಿ ಮೃತಪಟ್ಟಿದ್ದರು ಎಂದು ಇಸ್ರೇಲ್‌ ತಿಳಿಸಿರುವುದಾಗಿಯೂ ಬೈಡನ್‌ ಉಲ್ಲೇಖಿಸಿದ್ದಾರೆ.

ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ವಿರುದ್ಧದ ಸಮರವನ್ನು ನಿಲ್ಲಿಸುವಂತೆ ಜಾಗತಿಕ ಸಮುದಾಯ ಇರಿಸಿದ್ದ 'ಕದನ ವಿರಾಮ' ಪ್ರಸ್ತಾವವನ್ನು ಇಸ್ರೇಲ್‌ ಗುರುವಾರ ತಿರಸ್ಕರಿಸಿತ್ತು. ಇಸ್ರೇಲ್‌ನ ವಿದೇಶಾಂಗ ಸಚಿವ ಕ್ಯಾಟ್ಸ್‌ ಅವರು, 'ಹಿಜ್ಬುಲ್ಲಾ ಸದಸ್ಯರು ಶರಣಾಗದ ಹೊರತು ಯುದ್ಧ ನಿಲ್ಲುವುದಿಲ್ಲ' ಎನ್ನುವ ಮೂಲಕ ಲೆಬನಾನ್‌ ಮೇಲಿನ ದಾಳಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹಿಜ್ಬುಲ್ಲಾ ಸಂಘಟನೆಯ ಹಲವು ನಾಯಕರು ಲೆಬನಾನ್‌ನ ದಕ್ಷಿಣ ಬೈರೂತ್‌ನ ದಾಹಿಯಾ ಪ್ರದೇಶದಲ್ಲಿ ಶುಕ್ರವಾರ (ಸೆಪ್ಟೆಂಬರ್‌ 17ರಂದು) ಸಭೆ ಸೇರಿದ್ದರು. ಈ ಸಭೆಯಲ್ಲಿ ನಸ್ರಲ್ಲಾ ಭಾಗವಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇಸ್ರೇಲ್‌ ಸೇನೆ, ವಾಯುದಾಳಿ ನಡೆಸಿತ್ತು. ನಸ್ರಲ್ಲಾ ಮಾತ್ರವಲ್ಲದೆ, ಸಂಘಟನೆಯ ಕಮಾಂಡರ್‌ ಅಲಿ ಕರ್ಕಿ ಸಹ ಮೃತಪಟ್ಟಿದ್ದಾರೆ.

'ಹಸನ್‌ ನಸ್ರಲ್ಲಾ ಉಗ್ರವಾದದ ಮೂಲಕ ಜಗತ್ತನ್ನು ಬೆದರಿಸಲು ಇನ್ನು ಮುಂದೆ ಸಾಧ್ಯವಾಗದು. ಆತನನ್ನು ಹೊಡೆದುರುಳಿಸಿದ್ದೇವೆ' ಎಂದು ಇಸ್ರೇಲ್‌ ಶನಿವಾರ ಘೋಷಿಸಿದೆ.

ಖಮೇನಿ ಸ್ಥಳಾಂತರ: ನಸ್ರಲ್ಲಾ ಹತ್ಯೆ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries