ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಉಪ್ಪಳ ಪೇಟೆಯಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಉಪ್ಪಳದಿಂದ ಕೈಕಂಬ ವರೆಗೂ ವಿಸ್ತರಿಸುವಂತೆ ಆಗ್ರಹಿಸಿ ಶುಕ್ರವಾರ ಉಪ್ಪಳ ಪೇಟೆಯಲ್ಲಿ ಬೃಹತ್ ಜನಾಂದೋಲನ ನಡೆಯಿತು.
ಉಪ್ಪಳ ಎನ್.ಎಚ್ ಮೇಲ್ಸೇತುವೆ ನಿರ್ಮಾಣ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಉಪ್ಪಳ ಪೇಟೆಯಲ್ಲಿ ಪ್ರತಿಭಟನಾ ಧರಣಿ ಆಯೋಜಿಸಲಾಗಿತ್ತು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಂಜೇಶ್ವರ ವಿಭಾಗದ ಸದಸ್ಯ ಗೋಲ್ಡನ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರಂ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ.ಹನೀಫ್, ಬ್ಲಾಕ್ ಪಂಚಾಯಿತಿ ಸದಸ್ಯ ಅಶೋಕ್, ಗ್ರಾಮ ಪಂಚಾಯತ್ ಪ್ರತಿನಿಧಿಗಳಾದ ರಫೀಕ್ ಕೋಡಿಬೈಲ್, ಇಬ್ರಾಹಿಂ ಪೆರಿಂಗಡಿ, ಮಜೀದ್ ಪಚ್ಚಂಪಳ, ಬಾಬು ಬಂದ್ಯೋಡ್, ಮುಷ್ತಾಕ್ ಉಪ್ಪಳ, ಶರೀಫ್ ಹೋನೆಸ್ಟ್, ಅಶ್ರಫ್ ಬಡಾಜೆ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುತ್ತಿರುವ ಉಪ್ಪಳ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭದ ವೇಳೆಗೆ 24 ಮೀಟರ್‍ಗೆ ಸೀಮಿತವಾಗಿದ್ದ ಮೇಲ್ಸೇತುವೆಯನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹಾಗೂ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರ ನಿರಂತರ ಪ್ರಯತ್ನದ ಮೇರೆಗೆ 210ಮೀ.ಗೆ ವಿಸ್ತರಿಸಲಾಗಿದ್ದರೂ, ಇದು ಅಪ್ರಯೋಗಿಕವಾಗಿದ್ದು, ಇದನ್ನು ಉಪ್ಪಳ ಪೇಟೆಯಿಂದ ಕೈಕಂಬ ವರೆಗೆ ವಿಸ್ತರಿಸಿದಲ್ಲಿ ಮಾತ್ರ ಪೇಟೆಯಲ್ಲಿನ ವಾಹನ ದಟ್ಟಣೆಯಿಂದ ಪಾರಾಗಲು ಸಾಧ್ಯ ಎಂದು ಪ್ರತಿಭಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.