ನವದೆಹಲಿ: ಮಂಗಳವಾರ ಸಂಜೆ 5ರ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನೆ ನಿರತ ಕಿರಿಯ ವೈದ್ಯರು ತಿಳಿಸಿದ್ದಾರೆ.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ಖಂಡಿಸಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯದ ಆರೋಗ್ಯ ಕಾರ್ಯದರ್ಶಿ ಮತ್ತು ಡಿಎಚ್‌ಇ ರಾಜೀನಾಮೆಗೆ ಒತ್ತಾಯಿಸಿ ಇಂದು ಮಧ್ಯಾಹ್ನ ಸಾಲ್ಟ್ ಲೇಕ್‌ನಲ್ಲಿರುವ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ 'ಸ್ವಾಸ್ಥ್ಯ ಭವನ'ಕ್ಕೆ ರ‍್ಯಾಲಿ ನಡೆಸುವುದಾಗಿ ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದಾರೆ.
'ನಮ್ಮ ಬೇಡಿಕೆಗಳು ಈಡೇರಿಲ್ಲ. ಸಂತ್ರಸ್ತರಿಗೆ ನ್ಯಾಯ ದೊರಕಿಲ್ಲ. ಕೆಲಸ ಬಹಿಷ್ಕರಿಸುವ ಮೂಲಕ ನಮ್ಮ ಹೋರಾಟ ಮುಂದುವರಿಯಲಿದೆ. ಆರೋಗ್ಯ ಕಾರ್ಯದರ್ಶಿ ಹಾಗೂ ಡಿಎಚ್‌ಇ ರಾಜೀನಾಮೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂದು ಮಧ್ಯಾಹ್ನ ನಾವು 'ಸ್ವಾಸ್ಥ್ಯ ಭವನ'ಕ್ಕೆ ರ‍್ಯಾಲಿ ನಡೆಸಲಿದ್ದೇವೆ' ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದಾರೆ.
ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಕಿರಿಯ ವೈದ್ಯರು ಕಳೆದ ಒಂದು ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ಸಂಜೆ 5ರ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಒಂದು ವೇಳೆ ಕೆಲಸಕ್ಕೆ ಗೈರುಹಾಜರಾದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ವೈದ್ಯರು ಮಂಗಳವಾರ ಸಂಜೆ 5ರ ಒಳಗಾಗಿ ಕರ್ತವ್ಯಕ್ಕೆ ಮರಳಿದರೆ, ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.