ಮಲಪ್ಪುರಂ: ಮಂಚೇರಿಯಲ್ಲಿ ಯುವಕನೋರ್ವ ಎಂಪಾಕ್ಸ್ ರೋಗಲಕ್ಷಣಗಳೊಂದಿಗೆ ಮಂಚೇರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾನೆ. ಒಂದು ವಾರದ ಹಿಂದೆ ದುಬೈನಿಂದ ಮರಳಿದ ಎಡವಣ್ಣವರದ 38ರ ಹರೆಯದ ಸ್ಥಳೀಯ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಜೊಲ್ಲುರಸದ ಮಾದರಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ವೈರಾಲಜಿ ಲ್ಯಾಬ್‍ಗೆ ಕಳುಹಿಸಲಾಗಿದೆ. ಸದ್ಯ ಅವರು ನಿಗಾದಲ್ಲಿದ್ದಾರೆ.
ಕಳೆದ ಸೋಮವಾರ ಬೆಳಗ್ಗೆ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಮತ್ತು ಚಿಕನ್ ಪಾಕ್ಸ್ ತರಹದ ಚರ್ಮದ ದದ್ದುಗಳನ್ನು ನೋಡಿದ ನಂತರ ಅವರನ್ನು ತಜ್ಞರ ಚಿಕಿತ್ಸೆಗೆ ಒಳಪಡಿಸಲಾಯಿತು.
ಎಂಪಾಕ್ಸ್ ಶಂಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ನಿರೀಕ್ಷಿಸಲಾಗಿದೆ. ಸದ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶದಿಂದ ಬಂದಿದ್ದ ಅವರು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ತಂಗಿದ್ದರು. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಎಂಪಾಕ್ಸ್ ದೃಢಪಟ್ಟಿದೆಯಾದರೂ, ಕೇರಳದಲ್ಲಿ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ನಿಗಾ ಇಡುತ್ತಿರುವುದು ಇದೇ ಮೊದಲು.