ನವದೆಹಲಿ: ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ನೆಲಸಮ ಕಾರ್ಯ ನಡೆಯಬಾರದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 'ಬುಲ್ಡೋಜರ್ ನ್ಯಾಯ' ವನ್ನು ಸ್ಥಗಿತಗೊಳಿದ ನ್ಯಾಯಾಲಯ ಒಂದು ವೇಳೆ ಅಕ್ರಮ ಧ್ವಂಸ ಪ್ರಕರಣವಿದ್ದರೂ ಅದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಸಾರ್ವಜನಿಕ ರಸ್ತೆಗಳು, ಕಾಲುದಾರಿಗಳು, ಜಲಮೂಲಗಳು ಮತ್ತು ರೈಲ್ವೆ ಹಳಿಗಳ ಮೇಲಿನ ಅನಧಿಕೃತ ರಚನೆಗಳಿಗೆ ತನ್ನ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶಾದ್ಯಂತ ಒಂದೇ ಒಂದು ಕಟ್ಟಡ ಧ್ವಂಸ ಮಾಡಿದರೂ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗುತ್ತದೆ. ನಮ್ಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತದೆ ಎಂದು ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಆದೇಶ ಸಾರ್ವಜನಿಕ ರಸ್ತೆಗಳು, ಫುಟ್ಪಾತ್ ಒತ್ತುವರಿ ಮತ್ತು ಇತರೆ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ. ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ತೆರವು ಮಾಡಲು ಅವಕಾಶ ನೀಡಲಾಗುವುದು. ನಿಯಮದಂತೆ ಅನುಮತಿ ಪಡೆದು ಒತ್ತುವರಿ ತೆರವಿಗೆ ಅವಕಾಶ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಲವು ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಕಟ್ಟಡಗಳನ್ನು ಅಕ್ರಮವಾಗಿ ತೆರವು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ಲ ತುಷಾರ್ ಮೆಹ್ತಾ, ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಸುತ್ತ ಸಂಕಥನ ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 1ಕ್ಕೆ ಮುಂದೂಡಿದೆ.