ಕಾಸರಗೋಡು: ಕೃಷಿ ಸಂಸ್ಕøತಿಯ ಪ್ರತೀಕವಾಗಿರುವ ಓಣಂಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಆದರ್ಶ ರಾಜ ಮಹಾಬಲಿ ವರ್ಷಕ್ಕೊಂದು ಬಾರಿ ತಾನು ಆಳುತ್ತಿದ್ದ ಭೂಮಿ, ಪ್ರಜೆಗಳು, ಕೃಷಿ ಎಲ್ಲವನ್ನೂ ನೋಡಿಕೊಂಡು ಹೋಗುವ ಅವಕಾಶವನ್ನು ವಿಷ್ಣುವಿನಿಂದ ಪಡೆದ ಪ್ರತೀಕವಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸೆ. 6ರಿಂದ ತೊಡಗಿ ಭಾನುವಾರ ತಿರುವೋಣಂ ಮೂಲಕ ಹಬ್ಬ ಸಂಪನ್ನಗೊಂಡಿತು.
ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿತ್ತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇರಿದಂತೆ ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.
ಮಲಯಾಳಿಗರ ಮಾತಿನಂತೆ, "ಅತ್ತಂ ಪತ್ತ್ ಪೊನ್ನೋಣಂ' ಅಂದರೆ 'ಅತ್ತಂ'ನಿಂದ(ಸೆ.6)ಆರಂಭಗೊಂಡು ಹತ್ತನೇ ದಿನ(ಸೆ. 15)ದಂದು ತಿರುವೋಣಂ ಆಚರಿಸುವುದು ವಾಡಿಕೆ.
ಸೆ.6ರ ನಂತರ ಪ್ರತಿಯೊಂದು ದಿನವನ್ನೂ ಒಂದೊಂದು ಐತಿಹ್ಯದೊಂದಿಗೆ ಓಣಂ ಆಚರಿಸಿಕೊಂಡು ಬರಲಾಗಿದೆ. ಉತ್ರಾಡಂನಿಂದ ತೊಡಗಿ ಮುಂದಿನ ನಾಲ್ಕು ದಿವಸಗಳನ್ನು ಮಹಾಬಲಿ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಸಂಚಾರಕ್ಕಾಗಿ ಮೀಸಲಿರಿಸುತ್ತಾನೆ ಎಂಬುದು ಐತಿಹ್ಯ.
ತಿರುವೋಣಂ ದಿನದಂದು ಬೆಳಗ್ಗೆ ಬೇಗನೆ ಎದ್ದು, ಶುಚಿರ್ಭೂತರಾಗಿ ಮನೆ ಎದುರು ರಂಗೋಲಿ ಬಿಡಿಸಿ, ಹೊಸ ಬಟ್ಟೆ ಧರಿಸಿ ದೇಗುಲ ಸಂದರ್ಶನದೊಂದಿಗೆ ಮಧ್ಯಾಹ್ನ ಓಣಂ ಔತಣಕೂಟದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ನಂತರ ವಿವಿಧ ರೆಸಿಡೆನ್ಶಿಯಲ್ ಅಸೋಸಿಯೇಟ್ಸ್, ಕ್ಲಬ್‍ಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಕ್ರೀಡಾಕೂಟ, ತಿರುವಾದಿರ, ಹುಲಿವೇಷಧಾರಿಗಳ ಅಬ್ಬರದ ಕುಣಿತದೊಂದಿಗೆ ಓಣಂ ಕಳೆಯೇರಿತ್ತು. ಹೊಸದಾಗಿ ವಿವಾಹಿತರಾದವರಿಗೆ ಹಾಗೂ ಮೊದಲ ಓಣಂ ಆಚರಿಸುವ ಎಳೆಯ ಕಂದಮ್ಮಗಳಿಗೆ ಓಣಂ ಉತ್ಸವದಂದು ವಿಶೇಷ ಪರಿಗಣನೆ ಕಲ್ಪಿಸಲಾಗುತ್ತದೆ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭ ಬಕ್ತಾದಿಗಳನ್ನು ಸ್ವಾಗತಿಸುತ್ತಿರುವ ಹೂವಿನ ರಂಗೋಲಿ.