ನವದೆಹಲಿ: ದೂರಸಂಪರ್ಕ ಇಲಾಖೆಯು 'ದೂರಸಂಪರ್ಕ (ಡಿಜಿಟಲ್ ಭಾರತ್ ನಿಧಿ ಆಡಳಿತ) ನಿಯಮಗಳು, 2024' ರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸಂವಹನ ಸಚಿವಾಲಯದ ಪ್ರಕಾರ, ಹೊಸ ನಿಯಮಗಳು ದೂರಸಂಪರ್ಕ ಕಾಯ್ದೆ, 2023 ರ ಸೆಕ್ಷನ್ 24 (1) ಅಡಿಯಲ್ಲಿ ಸ್ಥಾಪಿಸಲಾದ 'ಡಿಜಿಟಲ್ ಭಾರತ್ ನಿಧಿ' ಉಪಕ್ರಮದ ನಿರ್ವಹಣೆ ಮತ್ತು ಅನುಷ್ಠಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಭಾರತೀಯ ಟೆಲಿಗ್ರಾಫ್ ಕಾಯಿದೆ, 1885 ರ ಅಡಿಯಲ್ಲಿ ರಚಿಸಲಾದ ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ ನ್ನು ಈಗ 'ಡಿಜಿಟಲ್ ಭಾರತ್ ನಿಧಿ' ಎಂದು ಮರುನಾಮಕರಣ ಮಾಡಲಾಗಿದೆ ದೂರಸಂಪರ್ಕ ಕಾಯಿದೆ, 2024 ರ ಸೆಕ್ಷನ್ 24(1) ಬದಲಾಗುತ್ತಿರುವ ತಾಂತ್ರಿಕ ಕಾಲದಲ್ಲಿ ಡಿಜಿಟಲ್ ಭಾರತ್ ನಿಧಿಯನ್ನು ಬೆಂಬಲಿಸುತ್ತದೆ.
ಕೇಂದ್ರ ಸಂವಹನ ಇಲಾಖೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೊಸ ನಿಯಮಗಳನ್ನು ಟೆಲಿಕಾಂ ಸೇವೆಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಕಸಿತ್ ಭಾರತದತ್ತ ಭಾರತದ ಮಿಷನ್ ನ್ನು ಬಲಪಡಿಸುವ ಸರ್ಕಾರದ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ವಿವರಿಸಿದ್ದಾರೆ.
ಡಿಜಿಟಲ್ ಭಾರತ್ ನಿಧಿಯಿಂದ ಕಡಿಮೆ ದರದಲ್ಲಿ ದೂರದ ಪ್ರದೇಶಗಳಲ್ಲಿ ದೂರಸಂಪರ್ಕ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಗಳಿಗೆ ಮತ್ತು ಸಮಾಜದ ಹಿಂದುಳಿದ ಗುಂಪುಗಳಾದ ಮಹಿಳೆಯರು, ವಿಕಲಚೇತನರು ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗಗಳಿಗೆ ಹಂಚಿಕೆ ಮಾಡುವ ಷರತ್ತು ಹೊಂದಿದೆ.
ಡಿಜಿಟಲ್ ಭಾರತ್ ನಿಧಿಯ ಅಡಿಯಲ್ಲಿ ಧನಸಹಾಯ ಮಾಡಲಾದ ಯೋಜನೆಗಳು ನಿಯಮಗಳಲ್ಲಿ ಒದಗಿಸಲಾದ ಒಂದು ಅಥವಾ ಹೆಚ್ಚಿನ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ.
ಇವುಗಳಲ್ಲಿ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ದೂರಸಂಪರ್ಕ ಸೇವೆಗಳ ವಿತರಣೆಗೆ ಅಗತ್ಯವಿರುವ ದೂರಸಂಪರ್ಕ ಉಪಕರಣಗಳು ಸೇರಿದಂತೆ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಯೋಜನೆಗಳು ಮತ್ತು ಟೆಲಿಕಾಂ ಭದ್ರತೆಯನ್ನು ಹೆಚ್ಚಿಸುವುದು, ದೂರಸಂಪರ್ಕ ಸೇವೆಗಳ ಪ್ರವೇಶ ಮತ್ತು ಕೈಗೆಟುಕುವಿಕೆ ದರದಲ್ಲಿ ಸುಧಾರಿಸುವುದು, ಕುಗ್ರಾಮ, ದೂರದ ಊರುಗಳಲ್ಲಿ, ನಗರ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಯ ದೂರಸಂಪರ್ಕ ತಂತ್ರಜ್ಞಾನಗಳ ಪರಿಚಯ ಮಾಡುವ ಗುರಿಯನ್ನು ಹೊಂದಿದೆ.
‘ಡಿಜಿಟಲ್ ಭಾರತ್ ನಿಧಿ’ ಅಡಿಯಲ್ಲಿ ಯೋಜನೆಗಳನ್ನು ಕೈಗೊಳ್ಳುವ ಮಾನದಂಡಗಳು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದನ್ನು ಒಳಗೊಂಡಿವೆ.