ಇಂಫಾಲ್: ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದ ಬೆನ್ನಲ್ಲೇ ಮುಂಜಾಗ್ರತೆ ಕ್ರಮವಾಗಿ ರಾಜ್ಯದ 2 ಜಿಲ್ಲೆಗಳಲ್ಲಿ ಕರ್ಫ್ಯೂ, ಒಂದು ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಅಲ್ಲದೆ, ರಾಜ್ಯದಾದ್ಯಂತ ಇಂಟರ್‌ನೆಟ್ ಸಂಪರ್ಕ ಸೇವೆಯನ್ನು 5 ದಿನ ಸ್ಥಗಿತಗೊಳಿಸಲಾಗಿದೆ. ಜಾಲತಾಣಗಳ ಮೂಲಕ ದ್ವೇಷ ಹರಡುವುದು, ಪ್ರತಿಭಟನೆ ಸಂಬಂಧಿತ ಚಿತ್ರಗಳ ಹಂಚಿಕೆಗೆ ತಡೆ, ದ್ವೇಷ ಭಾಷಣ, ವಿಡಿಯೊಗಳ ಹಂಚಿಕೆಗೆ ತಡೆಯೊಡ್ಡುವುದು ಇದರ ಉದ್ದೇಶ ವಾಗಿದೆ ಎಂದು ಗೃಹ ಇಲಾಖೆಯು ಈ ಕುರಿತ ಆದೇಶದಲ್ಲಿ ತಿಳಿಸಿದೆ.
ಮೊಬೈಲ್ ಫೋನ್ ಡಾಟಾ ಬಳಕೆ ಸೇರಿದಂತೆ ಎಲ್ಲ ರೀತಿಯ ಇಂಟರ್‌ನೆಟ್ ಸಂಪರ್ಕ ಸೇವೆಯನ್ನು ನಿರ್ಬಂಧಿಸಲಾಗಿದೆ ಈ ನಿರ್ಬಂಧವು ಸೆ.15ರ ಮಧ್ಯಾಹ್ನ 3 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಅವಧಿವರೆಗೂ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಿವಾಸಿಗಳಿಗೆ ಮನೆಯಿಂದ ಹೊರಗೆ ಬಾರದಂತೆಯೂ ನಿರ್ಬಂಧ ಹೇರಲಾಗಿದೆ. ತೌಬಾಲ್ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಹೇರಲಾಗಿದೆ.
'ಕಾನೂನು ಸ್ಥಿತಿ ಹದಗೆಡುತ್ತಿರುವ ಹಾಗೂ ನಿಯಂತ್ರಣ ತಪ್ಪುತ್ತಿರುವ ಕಾರಣ ಮುಂದಿನ ಆದೇಶದವರೆಗೆ ಎರಡು ಜಿಲ್ಲೆಗಳಲ್ಲಿ ಪೂರ್ಣ ಕರ್ಫ್ಯೂ ಇರಲಿದೆ' ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ನೂರಾರು ವಿದ್ಯಾರ್ಥಿಗಳು ಇಂಫಾಲ್‌ನ ಖ್ವೈರಾಂಬಾದ್ ಮಾರುಕಟ್ಟೆ ಆವರಣದಲ್ಲಿಯೇ ಸೋಮವಾರ ರಾತ್ರಿ ಬಿಡಾರ ಹೂಡಿದ್ದರು. ಸಮವಸ್ತ್ರದಲ್ಲಿದ್ದ ಈ ವಿದ್ಯಾರ್ಥಿಗಳಿಗೆ ಸ್ಥಳೀಯ ವರ್ತಕರೇ ರಾತ್ರಿ ವಾಸ್ತವ್ಯಕ್ಕೆ ನೆರವಾಗಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ ಸೋಮವಾರ ಹಿಂಸೆಗೆ ತಿರುಗಲು ರಾಜ್ಯದಲ್ಲಿನ ದೀರ್ಘಕಾಲದ ಬಿಕ್ಕಟ್ಟಿನ ಕುರಿತು ಸಮುದಾಯದಲ್ಲಿದ್ದ ಆಕ್ರೋಶವೇ ಕಾರಣ ಎಂದು ವಿದ್ಯಾರ್ಥಿ ನಾಯಕರೊಬ್ಬರು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಮತ್ತು ರಾಜ್ಯಪಾಲ ಆಚಾರ್ಯ ಅವರನ್ನೂ ವಿದ್ಯಾರ್ಥಿಗಳು ಭೇಟಿಯಾಗಿದ್ದರು. ಡ್ರೋನ್, ಕ್ಷಿಪಣಿ ದಾಳಿ, ಈಚಿನ ಹಿಂಸಾಚಾರ ಕೃತ್ಯಗಳಲ್ಲಿ 8 ಮಂದಿ ಸತ್ತಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಡಿದ್ದಾರೆ.
ರಾಜ್ಯದಲ್ಲಿ ಜನಾಂಗೀಯ ಘರ್ಷಣೆಯಿಂದಾಗಿ ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೂ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಅತಂತ್ರರಾಗಿದ್ದಾರೆ.