ಕುಂಬಳೆ: ಕರಾವಳಿಯ ಕೊಂಕಣಿ ಕಥೋಲಿಕ ಕ್ರೈಸ್ತರ ಕುಟುಂಬಹಬ್ಬವಾದ ತೆನೆ ಹಬ್ಬ(ಮೊಂತಿಫೆಸ್ತ್)ವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಮಾತೆಯ ಗ್ರೋಟ್ಟೋದ ಬಳಿ ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ಸ್ತುತಿಗೀತೆಗಳನ್ನು ಹಾಡಿ ನಮಿಸಲಾಯಿತು.
ಇಗರ್ಜಿಯ ಧರ್ಮಗುರು ಫಾ. ಹೆರಾಲ್ಡ್ ಡಿಸೋಜ ತೆನೆಗಳ ಆಶೀರ್ವಚನ ನಡೆಸಿದರು. ಸಹಾಯಕ ಧರ್ಮಗುರು ಫಾ. ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು. ಬಳಿಕ ಮಾತೆಯ ನಾಮಕ್ಕೆ ಸ್ತುತಿಗೀತೆಗಳನ್ನು ಹಾಡುತ್ತಾ ಆಶೀರ್ವದಿತ ತೆನೆಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಪ್ರವೇಶಿಸಿ ಬಳಿಕ ತೆನೆ ಹಬ್ಬದ ಸಂಭ್ರಮಾರ್ಥ ದಿವ್ಯಬಲಿಪೂಜೆ ನಡೆಯಿತು.
ಭಾರತೀಯ ಕಥೋಲಿಕ ಯುವಸಂಚಲನ ಪೆರ್ಮುದೆ ಘಟಕ ಆಯೋಜಿಸಿದ ಕ್ರಿಯೇಟಿವ್ ಕ್ಯಾನ್ವಸ್ ಕಾರ್ಯಕಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಧರ್ಮಗುರುಗಳು ಬಹುಮಾನ ವಿತರಿಸಿದರು. ಹಬ್ಬದ ಸಂಕೇತವಾಗಿ ಕಬ್ಬು ವಿತರಣೆ ನಡೆಯಿತು.
ಹಬ್ಬದ ಪೂರ್ವಭಾವಿಯಾಗಿ ಒಂಬತ್ತು ದಿನಗಳ ಕಾಲ ಮೇರಿ ಮಾತೆಯ ನೊವೆನಾ, ಕನ್ಯಾಮರಿಯಮ್ಮಳಿಗೆ ಪುಷ್ಪಾರ್ಚಣೆ, ವಿಶೇಷ ಪ್ರಾರ್ಥನೆ ನಡೆಯಿತು.