ಅಂದಾಜಿನ ಪ್ರಕಾರ 200ಕ್ಕೂ ಹೆಚ್ಚು ಸಿಬ್ಬಂದಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕೇಂದ್ರ ಕಚೇರಿಯ ಕಟ್ಟಡ, ಬುಚ್ ಮತ್ತು ಇತರ ಅಧಿಕಾರಿಗಳ ಕಚೇರಿಗಳ ಹೊರಗೆ ಮೌನ ಪ್ರತಿಭಟನೆ ನಡೆಸಿದರು.
90 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದ ಯಾವುದೇ ಉದ್ಯೋಗಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲದೆ, ಇತ್ತೀಚೆಗೆ, ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯುವಂತೆ ಉದ್ಯೋಗಿಗಳು ಒತ್ತಾಯಿಸಿದರು.
ಸೆಬಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಕೆಲ ನೌಕರರು ಪ್ರತಿಭಟನೆ ನಡೆಸಿದ್ದರು.
ಸೆಬಿ ಉನ್ನತ ಆಡಳಿತ ಮಂಡಳಿಯು ತಮ್ಮನ್ನು ಬಹಿರಂಗವಾಗಿ ನಿಂದಿಸುವುದು, ಕೂಗಾಡುವುದು, ಅಪಮಾನ ಮಾಡುವ ಮೂಲಕ ವಿಷಕಾರಿ ವಾತಾವರಣ ಸೃಷ್ಟಿಸಿದೆ ಎಂದು 500ಕ್ಕೂ ಅಧಿಕ ಉದ್ಯೋಗಿಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಸೆಬಿ, ಉದ್ಯೋಗಿಗಳು ತಪ್ಪಾಗಿ ಪತ್ರ ಬರೆದಿದ್ದಾರೆ. ಕೆಲವು ಬಾಹ್ಯ ಶಕ್ತಿಗಳು ಅವರ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿತ್ತು. ಇದು ಉದ್ಯೋಗಿಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹಿಂಪಡೆಯಬೇಕು ಮತ್ತು ಸೆಬಿ ಅಧ್ಯಕ್ಷೆ ಮಾಧವಿ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ವಿವಾದದ ಸುಳಿಯಲ್ಲಿ ಮಾಧವಿ
ನೌಕರರ ಜೊತೆ ದುರ್ವರ್ತನೆ ಅಲ್ಲದೆ ಷೇರುಪೇಟೆಯಲ್ಲಿ ಅಕ್ರಮದ ಬಗ್ಗೆಯೂ ಮಾಧವಿ ವಿರುದ್ಧ ಆರೋಪಗಳಿವೆ. ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್, ಆಗಸ್ಟ್ 10ರಂದು ಸೆಬಿ ಅಧ್ಯಕ್ಷೆ ಮತ್ತು ಅವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿತ್ತು. ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ವಿದೇಶಿ 'ಶೆಲ್' ಕಂಪನಿಗಳಲ್ಲಿ ಮಾಧವಿ ಅವರು ಪಾಲುದಾರಿಕೆ ಹೊಂದಿದ್ದಾರೆ ಎಂದಿತ್ತು. ಅಲ್ಲದೆ, ಅದಾನಿ ಸಮೂಹದ ಷೇರುಗಳು ಮಾರುಕಟ್ಟೆ ಬೆಲೆಗಿಂತ ಕೃತಕ ಬೆಲೆಗೆ ಮಾರಾಟವಾಗಿದ್ದರಲ್ಲಿ ಮಾಧವಿ ಪಾತ್ರವಿದೆ ಎಂದೂ ಆರೋಪಿಸಿತ್ತು.