ಮುಂಬೈ: 'ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯನ್ನು ಕರೆದೊಯ್ಯುತ್ತಿದ್ದ ಪೊಲೀಸರು ಆತ್ಮರಕ್ಷಣೆಗಾಗಿ ಆತನತ್ತ ಗುಂಡು ಹಾರಿಸಿದ್ದಾರೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ಹೇಳಿದ್ದಾರೆ.
ಮುಂಬೈ: 'ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯನ್ನು ಕರೆದೊಯ್ಯುತ್ತಿದ್ದ ಪೊಲೀಸರು ಆತ್ಮರಕ್ಷಣೆಗಾಗಿ ಆತನತ್ತ ಗುಂಡು ಹಾರಿಸಿದ್ದಾರೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ಹೇಳಿದ್ದಾರೆ.
ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, 'ಆರೋಪಿಯು, ಪೊಲೀಸರತ್ತ ಗುಂಡು ಹಾರಿಸಿ, ಓಡಿ ಹೋಗಿದ್ದರೆ ಏನಾಗುತ್ತಿತ್ತು' ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯನ್ನು ನಕಲಿ ಎನ್‌ಕೌಂಟರ್ ಎಂಬ ವಿಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಹೇಳಿಕೆಯನ್ನು ಮುಖ್ಯಮಂತ್ರಿ ಶಿಂದೆ ಖಂಡಿಸಿದ್ದಾರೆ.
'ಪೊಲೀಸರು ಆತ್ಮರಕ್ಷಣೆಗಾಗಿ ಪಿಸ್ತೂಲ್ ಇಟ್ಟುಕೊಂಡಿರುತ್ತಾರೆ. ಅದು ತೋರಿಕೆ ವಸ್ತುವಲ್ಲ. ಒಂದು ವೇಳೆ ಆರೋಪಿ ತಪ್ಪಿಸಿಕೊಂಡು ಹೋಗಿದ್ದರೆ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದವು. ತಪ್ಪಿಸಿಕೊಳ್ಳುವುದಕ್ಕೆ ನಾವೇ ಆತನಿಗೆ ನೆರವಾದೆವು ಎನ್ನುತ್ತಿದ್ದವು' ಎಂದರು.
ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಬದ್ಲಾಪುರದ ಶಾಲೆಯ ಆಡಳಿತ ಮಂಡಳಿ ಸದಸ್ಯರು ತಲೆಮರೆಸಿಕೊಂಡಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ, 'ಎಲ್ಲಿಯೇ ತಲೆ ಮರೆಸಿಕೊಂಡಿದ್ದರೂ ಅವರನ್ನೆಲ್ಲಾ ಒಂದು ದಿನ ಬಂಧಿಸಲಾಗುತ್ತದೆ. ಎಷ್ಟು ದಿನ ತಲೆ ಮರೆಸಿಕೊಳ್ಳುತ್ತಾರೆ' ಎಂದರು.
'ಅಕ್ಷಯ್ ಶಿಂದೆ ಒಬ್ಬ ರಾಕ್ಷಸನಿದ್ದಂತೆ. ಆತನಿಗೆ ನಾಲ್ವರು ಪತ್ನಿಯರಿದ್ದರು. ಒಬ್ಬ ಪತ್ನಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆತ ರಾಕ್ಷಸ ಎಂದೂ ಹೇಳಿಕೆ ನೀಡಿದ್ದಾರೆ. ಅವರೊಂದಿಗೆ ಆತ ಎಷ್ಟು ಕ್ರೂರವಾಗಿ ನಡೆದುಕೊಂಡಿರಬೇಕು ಊಹಿಸಿ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.