HEALTH TIPS

ಆರೋಗ್ಯ ಸೇವೆ ಒದಗಿಸುವವರಿಗೆ ಸುರಕ್ಷತೆ; ನಿರ್ದೇಶನ ಹೊರಡಿಸಿದ ಬಂಗಾಳ ಸರ್ಕಾರ

 ಕೋಲ್ಕತ್ತ: ಆರೋಗ್ಯ ಸೇವೆ ಒದಗಿಸುವವರ ಸುರಕ್ಷತೆ, ಭದ್ರತೆ ಮತ್ತು ಕೆಲಸದ ಸ್ಥಳದಲ್ಲಿ ಅವರಿಗೆ ಅನುಕೂಲಕರ ವಾತಾವರಣ ಖಾತರಿಪಡಿಸುವುದಕ್ಕೆ ಸಂಬಂಧಿಸಿದ ನಿರ್ದೇಶನಗಳ ಪಟ್ಟಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.

ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಮತ್ತು ಅಧಿಕಾರಿಗಳ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಏರ್ಪಟ್ಟ ಮರುದಿನ ಈ ಬೆಳವಣಿಗೆ ನಡೆದಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ನಿಗಮ್‌ ಅವರಿಗೆ ಬರೆದ ಪತ್ರದಲ್ಲಿ, 'ಆಸ್ಪತ್ರೆಗಳಲ್ಲಿ ವೈದ್ಯರ ಕರ್ತವ್ಯಕ್ಕೆ ಸಾಕಷ್ಟು ಕೊಠಡಿಗಳು, ಶೌಚಾಲಯಗಳು, ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು ಕುಡಿಯುವ ನೀರಿನ ಸೌಲಭ್ಯ' ಒದಗಿಸುವುದೂ ಸೇರಿದಂತೆ 10 ನಿರ್ದೇಶನಗಳನ್ನು ಹೊರಡಿಸಿದ್ದಾರೆ. ಈ ಸಂಬಂಧ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರದ ಜತೆಗಿನ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಕರಡನ್ನು, ಪ್ರತಿಭಟನೆನಿರತ ಕಿರಿಯ ವೈದ್ಯರು ಇದಕ್ಕೂ ಮುನ್ನ ಮನೋಜ್‌ ಪಂತ್‌ ಅವರಿಗೆ ಸಲ್ಲಿಸಿದ್ದರು

'ಸಭೆಯಲ್ಲಿ ಚರ್ಚೆಯಾದ ವಿಷಯಗಳು ಮಾತ್ರವಲ್ಲದೆ, ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ ಅಂಶಗಳು ಮತ್ತು ಒಮ್ಮತಕ್ಕೆ ಬರಲು ಸಾಧ್ಯವಾಗದ ಅಂಶಗಳನ್ನು ಒಳಗೊಂಡ ಇ-ಮೇಲ್‌ಅನ್ನು ಕಳುಹಿಸಲಾಗಿದೆ. ಅದರ ಆಧಾರದಲ್ಲಿ ಸರ್ಕಾರ ನಿರ್ದೇಶನಗಳನ್ನು ನೀಡುವ ನಿರೀಕ್ಷೆಯಿದೆ' ಎಂದು ವೈದ್ಯರು ತಿಳಿಸಿದ್ದರು.

ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ- ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು 40 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.

ಸಂತ್ರಸ್ತೆಯ ತಂದೆಯಿಂದ ಸಿಬಿಐಗೆ ಪತ್ರ: ಮಗಳ ಜತೆಗೆ ನಡೆಸಿದ ಕೊನೆಯ ಸಂಭಾಷಣೆಯ ಆಡಿಯೊವನ್ನು ಸಂರಕ್ಷಿಸಿಡುವಂತೆ ಕೋರಿ, ಸಂತ್ರಸ್ತೆಯ ತಂದೆ ಸಿಬಿಐಗೆ ಪತ್ರ ಬರೆದಿದ್ದಾರೆ.

'ಹತ್ಯೆಗೆ ಕೆಲವು ಗಂಟೆಗಳ ಮುನ್ನ ಮಗಳಿಗೆ ಕರೆ ಮಾಡಿ ಮಾತನಾಡಿದ್ದೆ. ಆಕೆಯ ಮೊಬೈಲ್‌ ಫೋನ್‌ನಲ್ಲಿರುವ ಕರೆಗಳ ಮಾಹಿತಿಯನ್ನು ಸಂರಕ್ಷಿಸಿಡಬೇಕು. ಸೆಮಿನಾರ್‌ ಹಾಲ್‌ ಇರುವ ಮಹಡಿ ಒಳಗೊಂಡಂತೆ ಆಸ್ಪತ್ರೆಯಲ್ಲಿರುವ ಎಲ್ಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನೂ ಸಂರಕ್ಷಿಸಿಡಬೇಕು' ಎಂದು ಪತ್ರದಲ್ಲಿ ಕೋರಿದ್ದಾರೆ.

ಸಚಿವರ ಹೇಳಿಕೆ: ವಿವಾದ

ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ 'ರಿಕ್ಲೇಮ್‌ ದಿ ನೈಟ್' ಹೆಸರಿನಲ್ಲಿ ರಾತ್ರಿ ವೇಳೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯೊಬ್ಬರು ಮದ್ಯ ಸೇವಿಸಿದ್ದಾರೆ ಎಂದು ಆರೋಪಿಸಿ ಬಂಗಾಳದ ಪಶು ಸಂಗೋಪನಾ ಸಚಿವ ಸ್ವಪನ್‌ ದೇವನಾಥ್‌ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

'ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಇಬ್ಬರು ಪುರುಷರ ಜತೆ ಹೋಟೆಲ್‌ವೊಂದರಲ್ಲಿ ಕುಳಿತು ಬಿಯರ್‌ ಕುಡಿದಿದ್ದಾರೆ' ಎಂದು ದೇವನಾಥ್‌ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

'ಆ ಮಹಿಳೆಗೆ ಸಂಬಂಧಿಸಿದಂತೆ ಏನಾದರೂ ಅಹಿತಕರ ಘಟನೆ ನಡೆದಿದ್ದರೆ ಏನಾಗುತ್ತಿತ್ತು? ಪೋಷಕರಿಗೆ ನಾನು ಒಂದು ಮಾತು ಹೇಳುತ್ತೇನೆ- ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ನಿಮ್ಮ ಮಗಳು ಪಾಲ್ಗೊಳ್ಳಲಿ. ಆದರೆ ಮಧ್ಯರಾತ್ರಿಯ ಬಳಿಕ ಆಕೆ ಏನು ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ನಿಗಾ ವಹಿಸಿ' ಎಂದು ಹೇಳುವುದು ವಿಡಿಯೊದಲ್ಲಿದೆ.

ಟಿಎಂಸಿಯು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. 'ಇಂತಹ ಹೇಳಿಕೆಗಳನ್ನು ಪಕ್ಷವು ಅನುಮೋದಿಸುವುದಿಲ್ಲ' ಎಂದು ಪಕ್ಷದ ನಾಯಕ ಕುನಾಲ್‌ ಘೋಷ್‌ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries