ಕೋಲ್ಕತ್ತ: ನಗರದ ಸರ್ಕಾರಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ರಾತ್ರಿ 'ರಿಕ್ಲೈಮ್ ದಿ ನೈಟ್' ಪ್ರತಿಭಟನೆಗೆ ಕರೆ ನೀಡಲಾಗಿದೆ.
ಚಲನಚಿತ್ರ ನಟರು, ಸಂಗೀತಗಾರರು, ಕಲಾವಿದರು, ವ್ಯಂಗ್ಯಚಿತ್ರಕಾರರು ಸೇರಿದಂತೆ ವಿವಿಧ ಕ್ಷೇತ್ರಗಳ ಹೆಸರಾಂತ ಗಣ್ಯರು 'ರಿಕ್ಲೈಮ್ ದಿ ನೈಟ್' ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಿಮ್ಜಿಮ್ ಸಿನ್ಹಾ ಹೇಳಿದ್ದಾರೆ.
ಕೋಲ್ಕತ್ತದ ಎಸ್.ಸಿ. ಮಲ್ಲಿಕ್ ರಸ್ತೆಯ ಉದ್ದಕ್ಕೂ ಹಾಗೂ ಗೋಲ್ ಪಾರ್ಕ್‌ನಿಂದ ಗರಿಯಾವರೆಗೆ ಅನೇಕ ಸಭೆಗಳನ್ನು ಆಯೋಜಿಸಲಾಗಿದೆ. ಜತೆಗೆ ಉತ್ತರದ ಬಿ.ಟಿ. ರಸ್ತೆಯಿಂದ ಶ್ಯಾಂಬಜಾರ್‌ವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಸಂಘಟಕರೊಬ್ಬರು ತಿಳಿಸಿದ್ದಾರೆ.
'ರಿಕ್ಲೈಮ್ ದಿ ನೈಟ್' ಹೆಸರಿನ ಅಭಿಯಾನವು ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಪ್ರಚಾರವಾಗಿದ್ದರಿಂದ ಆಗಸ್ಟ್ 14 ಮತ್ತು ಸೆಪ್ಟೆಂಬರ್ 4 ರಂದು ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರು.
ಕೋಲ್ಕತ್ತದ ಹೊರತಾಗಿ ಬ್ಯಾರಕ್‌ಪೋರ್, ಬರಾಸತ್, ಬಡ್ಜ್‌ಬಡ್ಜ್, ಬೆಲ್‌ಘಾರಿಯಾ, ಅಗರ್‌ಪಾರಾ, ಡುಮ್‌ಡಮ್ ಮತ್ತು ಬಾಗುಯಾಟಿ ಮುಂತಾದವುಗಳಲ್ಲಿ ಇದೇ ರೀತಿಯ ಪ್ರದರ್ಶನಗಳನ್ನು ಯೋಜಿಸಲಾಗಿದೆ.
ಆಗಸ್ಟ್ 9ರಂದು ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಆಡಳಿತ ಮತ್ತು ವಿಪಕ್ಷಗಳ ನಡುವೆ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿತ್ತು.