ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ಸರ್ಕಾರ ಒಂದಲ್ಲ ಒಂದು ರೀತಿಯ ಪ್ರಹಾರ ನೀಡುತ್ತಿದ್ದು, ಕನ್ನಡದಲ್ಲಿ ಬರುತ್ತಿದ್ದ ಕೆಎಸ್‍ಇಬಿ ಬಿಲ್ಲನ್ನು ನಿಲುಗಡೆಗೊಳಿಸಿದ ನಂತರ ಇದೀಗ ಇಂಗ್ಲಿಷ್‍ಗೂ ಖೋಕ್ ನೀಡಲು ಮುಂದಾಗಿದೆ.
ಇನ್ನು ಮುಂದೆ ಮಲಯಾಳದಲ್ಲಿ ಮಾತ್ರ ವಿದ್ಯುತ್ ಬಿಲ್ ನೀಡಿದರೆ ಸಾಕು ಎಂದು ಸರ್ಕಾರ ವಿದ್ಯುತ್ ನಿಗಮಕ್ಕೆ ಅದೇಶ ನೀಡಿರುವುದು ಗಡಿನಾಡ ಕನ್ನಡಿಗರನ್ನು ಅಸಮಧಾನಕ್ಕೀಡುಮಾಡಿದೆ. ಕಾಸರಗೋಡಿನಲ್ಲೇ ಹುಟ್ಟಿ ಬೆಳೆದು, ಇಲ್ಲೇ ಜೀವನ ನಿರ್ವಹಿಸುತ್ತಿರುವ ಗಡಿನಾಡ ಕನ್ನಡಿಗರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ಕೇರಳ ಸರ್ಕಾರ ನಡೆಸಿಕೊಳ್ಳುತ್ತಿರುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ. ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿದ್ದು, ಇದು ಭಾರತೀಯ ಸಂವಿಧಾನದಲ್ಲೂ ಉಲ್ಲೇಖಿಸಲ್ಪಟ್ಟಿದೆ. ಮಾತ್ರವಲ್ಲ ಸಂವಿಧಾನಾತ್ಮಕವಾಗಿ ಕಾಸರಗೋಡಿಗೆ ಕೆಲವೊಂದು ಸವಲತ್ತುಗಳನ್ನೂ ಕಲ್ಪಿಸಲಾಗಿದ್ದರೂ, ಇದ್ಯಾವುದೂ ತಮಗೆ ಅನ್ವಯವಾಗುವುದಿಲ್ಲ ಎಂಬ ಧೋರಣೆ ಸರ್ಕಾರಕ್ಕಿದೆ. ಈಗಾಗಲೇ 'ಆಡಳಿತ ಭಾಷೆ ಮಲಯಾಳ'ಎಂಬ ಘೋಷಣೆಯೊಂದಿಗೆ ಅಚ್ಚಕನ್ನಡ ಪ್ರದೇಶದಲ್ಲೂ ಮಲಯಾಳ ನಾಮಫಲಕ, ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೂಚನೆ, ಆದೇಶಗಳೆಲ್ಲವೂ ಮಲಯಾಳದಲ್ಲೇ ಮುದ್ರಣಗೊಳ್ಳುತ್ತಿದ್ದು, ಇದರಿಂದ ಕನ್ನಡಿಗರಿಗೆ ಬಹಳಷ್ಟು ಸಂಕಷ್ಟ ಅನುಭವಿಸಬೇಕಾಗುತ್ತಿದೆ. ಕನ್ನಡ ಮಾತ್ರ ಬಲ್ಲ ಅದೆಷ್ಟೋ ಮಂದಿ ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿದ್ದು, ಇವರಿಗೆ ಮಲಯಾಳದ ಜ್ಞಾನ ಲವಲೇಶವೂ ಇಲ್ಲ. ಇನ್ನು ವಿದ್ಯುತ್ ಬಿಲ್ ಮಲಯಾಳದಲ್ಲೇ ಪೂರೈಕೆಯಾದರೆ, ಈ ಚೀಟಿ ಹಿಡಿದುಕೊಂಡು, ಮಲಯಾಳ ಬಲ್ಲ ಇನ್ನೊಬ್ಬರ ಬಾಗಿಲಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಕನ್ನಡಿಗರು ಅಳಲು ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕನ್ನಡದ ಮಾಧ್ಯಮದವರಿಗೆ ಕನ್ನಡದಲ್ಲೇ ಆದೇಶ, ಸೂಚನೆ ಒದಗಿಸಲಾಗುವುದು ಎಂದು ಸರ್ಕಾರ ಭರವಸೆ ನೀಡುತ್ತಿದ್ದು, ಇನ್ನೊಂದೆಡೆ ಸದ್ದಿಲ್ಲದೆ ಕನ್ನಡಕ್ಕೆ ಖೋಕ್ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಈ ಹಿಂದಿನಂತೆ ಮಲಯಾಳದೊಂದಿಗೆ ಕನ್ನಡದಲ್ಲೂ ವಿದ್ಯುತ್ ಬಿಲ್ ಒದಗಿಸುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿದೆ.