ನವದೆಹಲಿ: ಮಹಿಳಾ ವೈದ್ಯರನ್ನು ರಾತ್ರಿ ಪಾಳಿಯಲ್ಲಿ ಅಥವಾ 12 ಗಂಟೆಗಳ ಪಾಳಿ ಮೀರಿ ಕೆಲಸ ಮಾಡುವುದನ್ನು ಪಶ್ಚಿಮ ಬಂಗಾಳ ಸರ್ಕಾರ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಮಹಿಳೆಯರು ವಿನಾಯಿತಿಗಳನ್ನು ಬಯಸುವುದಿಲ್ಲ, ಸಮಾನ ಅವಕಾಶಗಳನ್ನು ಮಾತ್ರ ಬಯಸುತ್ತಾರೆ ಎಂದು ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಮಹಿಳಾ ವೈದ್ಯರಿಗೆ ರಾತ್ರಿ ಪಾಳಿ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಇದೀಗ ಈ ಅಧಿಸೂಚನೆ ಹಿಂಪಡೆಯುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿಸಿದೆ.
ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠ, ರಾಜ್ಯ ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮಹಿಳಾ ವೈದ್ಯರಿಗೆ ತಮ್ಮ ಪುರುಷ ಸಹವರ್ತಿಗಳಿಗೆ ಸಮಾನವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದೆ.
ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಅವರು ರಿಯಾಯಿತಿಯನ್ನು ಬಯಸುವುದಿಲ್ಲ. ಅದಕ್ಕೆ ಪರಿಹಾರವೆಂದರೆ, ನೀವು ಭದ್ರತೆಯನ್ನು ನೀಡಬೇಕು. ಪಶ್ಚಿಮ ಬಂಗಾಳ ಅಧಿಸೂಚನೆಯನ್ನು ಸರಿಪಡಿಸಬೇಕು. ಭದ್ರತೆ ಒದಗಿಸುವುದು ನಿಮ್ಮ ಕರ್ತವ್ಯ, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳಲಾಗುವುದಿಲ್ಲ. ಮಹಿಳೆಯರು ಪೈಲಟ್‍ಗಳಾಗಿ, ಸೇನೆಯಲ್ಲಿ ರಾತ್ರಿ ಕೆಲಸ ಮಾಡುತ್ತಾರೆ ಎಂಬುದನ್ನು ನೀವು ಗಮನಿಸಬೇಕು ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್ ಅವರಿಗೆ ಸಿಜೆಐ ಸೂಚಿಸಿದರು.
"ನಾವು ಇಂದು ನಮ್ಮ ದೇಶದಲ್ಲಿ ಕೆಲಸ ಮಾಡುವ ಯಾವುದೇ ಮಹಿಳೆಗೆ, ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ" ಎಂದು ಸಿಜೆಐ ಹೇಳಿದರು.