ಮುಳ್ಳೇರಿಯ: ಗ್ರಾಮೀಣ ಪ್ರದೇಶವಾದ ಕಾರಡ್ಕದಲ್ಲಿ ಅನೇಕ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಸ್ಥಳಾವಕಾಶ ಇದೆ. ಇಲ್ಲಿ ಒಂದು ಸ್ಪೋಟ್ರ್ಸ್ ಶಾಲೆ ಸ್ಥಾಪನೆಯಾಗಬೇಕು ಎಂದು ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಒಕ್ಕೊರಲಿನಿಂದ ಒತ್ತಾಯಿಸಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾಗಿರುವ ಕಾಸರಗೋಡಿನ ಮಂದಿಗೆ ಇದೊಂದು ಅಗತ್ಯವೂ ಹೌದು ಎಂದು ಸಭೆ ಅಭಿಪ್ರಾಯಪಟ್ಟಿತು.
ಶತಮಾನದ ಹಿರಿಮೆಯುಳ್ಳ ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಕೆ, ಉಪಾಧ್ಯಕ್ಷರಾಗಿ ಬಶೀರ್ ಬಿ, ಮಾತೃ ಸಮಿತಿ ಅಧ್ಯಕ್ಷರಾಗಿ ರಂಜಿನಿ, ಎಸ್.ಎಂ.ಸಿ. ಅಧ್ಯಕ್ಷರಾಗಿ ಸುರೇಶ್ ಮೂಡಾಂಕುಳ ಆಯ್ಕೆಯಾದರು.