ಮಧೂರು : ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕೆ ಏರಿಕ್ಕಳ ವಯನಾಡು ಕುಲವನ್, ರಕ್ತೇಶ್ವರೀ ನಾಗಬನದ ಮುಂಭಾಗದಲ್ಲಿರುವ ಬಯಲಿನಲ್ಲಿ ಭತ್ತದ ನಾಟಿಗೆ ಚಾಲನೆ ನೀಡಲಾಯಿತು.
ಮಧೂರು ಸನಿಹದ ಏರಿಕ್ಕಳ ಬಯಲಿನಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ತಮ್ಮ ದಿವ್ಯ ಹಸ್ತದಿಂದ ನೇಜಿ ನಡುವ ಮೂಲಕ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭತ್ತದ ಬಯಲಲ್ಲಿ ನಾಟಿ ಕಾರ್ಯಕ್ರಮಕ್ಕೂ ಮೊದಲು ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ಅರ್ಚಕ ವೇಣುಗೋಪಾಲ ಕಲ್ಲೂರಾಯ ಅವರು ಪ್ರಾರ್ಥನೆ ನೆರವೇರಿಸಿದರು. ನವೀಕರಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು. ಊರ ಭಕ್ತಾದಿಗಳು ನೇಜಿ ಕಿತ್ತು ಹದಬರಿಸಿದ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆ. 18ರಂದು ಏರಿಕ್ಕಳದ ಭತ್ತದ ಬಯಲಿನಲ್ಲಿ ಭತ್ತದ ಬೀಜ ಬಿತ್ತನೆ ನಡೆಸಲಾಗಿತ್ತು. ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಉದ್ಯಮಿ ಕೆ ಕೆ ಶೆಟ್ಟಿ ಅವರು ಬಿತ್ತನೆ ಬೀಜ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.