ಮಂಜೇಶ್ವರ: ಸಂಗೀತ ಚಿಕಿತ್ಸೆ(ಮ್ಯೂಸಿಕ್ ಥೆರಪಿ) ಮನುಷ್ಯನ ದೈಹಿಕ ಆರೋಗ್ಯ ಹೆಚ್ಚಳ ಮಾಡುವುದಲ್ಲದೆ ಸಕಾರಾತ್ಮಕ ಯೋಚನೆ ಹುಟ್ಟುಹಾಕುವ ಮೂಲಕ ಮನುಷ್ಯನ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕಾರ್ಯವೆಸಗುತ್ತದೆ ಎಂದು ದೇರಳಕಟ್ಟೆ ಯೆನೇಪೆÇಯ ಮೆಡಿಕಲ್ ಕಾಲೇಜು ಇ.ಎನ್.ಟಿ ತಜ್ಞೆ ಹಾಗೂ ಸಂಗೀತ ಚಿಕಿತ್ಸಕಿ ಡಾ.ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ ಹೇಳಿದರು.
ಅವರು ವರ್ಕಾಡಿ ದೈಗೋಳಿ ಶ್ರೀ ಸಾಯಿನಿಕೇತನ ಸೇವಾ ಸಂಸ್ಥೆಯ ಆಶ್ರಮವಾಸಿಗಳಿಗೆ ಸಂಗೀತ ಚಿಕಿತ್ಸೆ ನೀಡುವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶ್ರೀ ಸಾಯಿನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಉದಯಕುಮಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಶ್ರಮವಾಸಿಗಳ ಮಾನಸಿಕ ಆರೋಗ್ಯ ಸುಧಾರಿಸುವ ಹಾಗೂ ಮನಸ್ಸನ್ನು ಉಲ್ಲಾಸಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಸಂಗೀತ ಚಿಕಿತ್ಸಾ ತರಬೇತಿಯ ಪ್ರಯೋಜನ ಆಶ್ರಮವಾಸಿಗಳೆಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಯೆನೇಪೆÇಯ ಮೆಡಿಕಲ್ ಕಾಲೇಜಿನ ವಾಕ್ ಶ್ರವಣ ತಜ್ಞೆ, ಸಹಾಯಕ ಪ್ರಾಧ್ಯಾಪಕಿ ಡಾ.ಪಾವನಾ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಫರಾ, ಕಶ್ವಿ ಸಹಕಾರದೊಂದಿಗೆ ಆಶ್ರಮವಾಸಿಗಳಿಗೆ ವಿವಿಧ ವ್ಯಾಯಾಮ, ಹಾಡು, ಗುಂಪು ಚಟುವಟಿಕೆ, ಧ್ಯಾನ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ ವಂದಿಸಿದರು.