ಬಂದಾರ್ ಸೆರಿ ಬೆಗವಾನ್: ಭಾರತವು 'ಅಭಿವೃದ್ಧಿಯ ನೀತಿಯನ್ನು ಬೆಂಬಲಿಸುತ್ತದೆಯೇ ಹೊರತು ವಿಸ್ತರಣಾ ನೀತಿಯನ್ನಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆಗಾಗಿ ಬ್ರೂನೈಗೆ ಭೇಟಿ ನೀಡಿದ್ದ ಅವರು, ಚೀನಾ ಗುರಿಯಾಗಿರಿಸಿಕೊಂಡು ಈ ಹೇಳಿಕೆ ನೀಡಿದರು.
ಸುಲ್ತಾನ್ ಬೊಲ್ಕಿಯಾ ಅವರು ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡ ಮೋದಿ, 'ನಾವು ಅಭಿವೃದ್ಧಿಯ ನೀತಿಯನ್ನು ಬೆಂಬಲಿಸುತ್ತೇವೆಯೇ ಹೊರತು ವಿಸ್ತರಣಾ ನೀತಿಯನ್ನು ಬೆಂಬಲಿಸುವುದಿಲ್ಲ' ಎಂದು ಯಾವುದೇ ದೇಶದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಹೇಳಿದರು.
'ಈ ಪ್ರದೇಶದಲ್ಲಿ ಮುಕ್ತ ಸಂಚಾರಕ್ಕೆ ಸಂಬಂಧಿಸಿ ಮಾದರಿ ನೀತಿ ಸಂಹಿತೆಯನ್ನು ಅಂತಿಮಗೊಳಿಸಬೇಕೆಂಬುದನ್ನು ನಾವು ಒಪ್ಪುತ್ತೇವೆ' ಎಂದು ಹೇಳಿದ ಮೋದಿ, ಭಾರತವು ಯಾವಾಗಲೂ 'ಆಸಿಯಾನ್' ಕೇಂದ್ರೀಕರಣಕ್ಕೆ ಆದ್ಯತೆ ನೀಡಿದೆ ಮತ್ತು ಆ ನಿಲುವನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.
'ನಾವು ಯುಎನ್‌ಸಿಎಲ್‌ಒಎಸ್(ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ)ನಂತಹ ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ನೌಕಾಯಾನ ಮತ್ತು ವಾಯುಯಾನ ಮುಕ್ತತೆಯನ್ನು ಬೆಂಬಲಿಸುತ್ತೇವೆ' ಎಂದು ಮೋದಿ ಹೇಳಿದರು.
ಉಭಯ ನಾಯಕರ ಮಾತುಕತೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಜೊತೆಗೆ ಈ ಪ್ರದೇಶದಲ್ಲಿ ಮುಕ್ತ ನೌಕಾಯಾನ ಮತ್ತು ವಾಯುಯಾನದ ಕಾನೂನುಬದ್ಧ ವಾಣಿಜ್ಯ ಚಟುವಟಿಕೆಯನ್ನು ಗೌರವಿಸುವುದು, ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ವಿಶೇಷವಾಗಿ ಯುಎನ್‌ಸಿಎಲ್‌ಒಎಸ್ 1982ರ ಪ್ರಕಾರ ಶಾಂತಿಯುತ ವಿಧಾನಗಳ ಮೂಲಕ ವಿವಾದಗಳನ್ನು ಪರಿಹರಿಸಲು ಉಭಯ ನಾಯಕರು ಸಂಬಂಧಿಸಿದ ಎಲ್ಲ ರಾಷ್ಟ್ರಗಳನ್ನು ಒತ್ತಾಯಿಸಿದರು.
ದಕ್ಷಿಣ ಚೀನಾ ಸಮುದ್ರ (ಎಸ್‌ಸಿಎಸ್) ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ (ಇಸಿಎಸ್) ಚೀನಾ ತೀವ್ರತರವಾದ ಪ್ರಾದೇಶಿಕ ವಿವಾದಗಳನ್ನು ಹುಟ್ಟುಹಾಕತೊಡಗಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಬಹುಪಾಲು ಪ್ರಾಬಲ್ಯ ಸಾಧಿಸಿದೆ. ಫಿಲಿಪ್ಪೀನ್ಸ್, ಮಲೇಷ್ಯಾ, ವಿಯೆಟ್ನಾಂ, ಬ್ರೂನೈ ಮತ್ತು ತೈವಾನ್ ಕೂಡ ಈ ಪ್ರದೇಶದ ಮೇಲೆ ತಮಗೂ ಹಕ್ಕಿದೆ ಎಂದು ಪ್ರತಿಪಾದಿಸುತ್ತಿವೆ.
ಸಿಂಗಪುರಕ್ಕೆ ಬುಧವಾರ ಎರಡು ದಿನಗಳ ಭೇಟಿಗಾಗಿ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದರು- ಪಿಟಿಐ ಚಿತ್ರಪ್ರಮುಖ ಅಂಶಗಳು
* ಬ್ರೂನೈಗೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಮೋದಿ ಅವರಿಗೆ ಸುಲ್ತಾನ್ ಬೊಲ್ಕಿಯಾ ಮತ್ತು ಅವರ ಕುಟುಂಬ ಸದಸ್ಯರು ಸುಲ್ತಾನರ ಅಧಿಕೃತ ನಿವಾಸ ಮತ್ತು ಬ್ರೂನೈ ಸರ್ಕಾರದ ಕೇಂದ್ರ ಸ್ಥಾನ ಇಸ್ತಾನಾ ನೂರುಲ್ ಇಮಾನ್‌ನಲ್ಲಿ ಅದ್ದೂರಿ ಸ್ವಾಗತ ನೀಡಿದರು
* ಮೋದಿಯವರ ಈ ಐತಿಹಾಸಿಕ ಭೇಟಿಯು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ
* ಉಪಗ್ರಹ ಮತ್ತು ಉಡಾವಣಾ ವಾಹನಗಳಿಗಾಗಿ ಟೆಲಿಮೆಟ್ರಿ ಟ್ರ್ಯಾಕಿಂಗ್ ಹಾಗೂ ಟೆಲಿಕಮಾಂಡ್ ಸ್ಟೇಷನ್ ಕಾರ್ಯಾಚರಣೆಯಲ್ಲಿ ಸಹಕಾರ ನೀಡುವ ಬಗ್ಗೆ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು
* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸ್ಥಾಪಿಸಿರುವ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಟೆಲಿಕಮಾಂಡ್ ಸ್ಟೇಷನ್‌ಗೆ ಬ್ರೂನೈ ನೀಡಿರುವ ಕೊಡುಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು
ಬ್ರೂನೈ ಪ್ರಮುಖ ಪಾಲುದಾರ: ಮೋದಿ
'ಭಾರತದ 'ಆಕ್ಟ್ ಈಸ್ಟ್ ಪಾಲಿಸಿ' ಮತ್ತು ಇಂಡೊ-ಪೆಸಿಫಿಕ್ ವಿಷನ್‌ನಲ್ಲಿ ಬ್ರೂನೈ ಪ್ರಮುಖ ಪಾಲುದಾರನಾಗಿದೆ. ನಾವು ಪರಸ್ಪರರ ಭಾವನೆಗಳನ್ನು ಗೌರವಿಸುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ರೂನೈ ಸುಲ್ತಾನ್ ಹಾಜಿ ಹಸ್ಸಾನಲ್ ಬೊಲ್ಕಿಯಾ ಅವರ ಜತೆ ರಕ್ಷಣೆ ವ್ಯಾಪಾರ ಮತ್ತು ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವುದು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಪರಸ್ಪರ ಹಿತಾಸಕ್ತಿ ರಕ್ಷಿಸುವ ಕುರಿತು ಮೋದಿ ಮಾತುಕತೆ ನಡೆಸಿದರು.
'ಬ್ರೂನೈಗೆ ನಾನು ಭೇಟಿ ನೀಡಿರುವುದು ಮತ್ತು ನಮ್ಮ ನಡುವೆ ನಡೆದಿರುವ ಚರ್ಚೆಗಳು ದ್ವಿಪಕ್ಷೀಯ ಸಂಬಂಧಗಳಿಗೆ ಕಾರ್ಯತಂತ್ರದ ದಿಕ್ಕು ತೋರಲಿವೆ ಎನ್ನುವ ನಂಬಿಕೆ ಇದೆ. ಉಭಯ ರಾಷ್ಟ್ರಗಳು ಶತಮಾನಗಳಿಂದ ಸಾಂಸ್ಕೃತಿಕ ಸಂಬಂಧಗಳನ್ನು ಕಾಯ್ದುಕೊಂಡುಬಂದಿವೆ. ಗಾಢವಾದ ಸಾಂಸ್ಕೃತಿಕ ಸಂಪ್ರದಾಯಗಳು ದ್ವಿಪಕ್ಷೀಯ ಸ್ನೇಹಕ್ಕೆ ಆಧಾರವಾಗಿವೆ' ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಬಣ್ಣಿಸಿದರು.
'ರಕ್ಷಣೆ ವ್ಯಾಪಾರ ಹೂಡಿಕೆ ಇಂಧನ ಬಾಹ್ಯಾಕಾಶ ತಂತ್ರಜ್ಞಾನ ಆರೋಗ್ಯ ಮತ್ತು ಫಾರ್ಮಾಸ್ಯುಟಿಕಲ್ಸ್ ಸಾಮರ್ಥ್ಯ ವೃದ್ಧಿ ಸಂಸ್ಕೃತಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಹಾಗೂ ಎರಡೂ ದೇಶಗಳ ಜನರ ನಡುವೆ ಸಹಕಾರ ಹೆಚ್ಚಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು. ಅಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಪರಸ್ಪರ ಹಿತಾಸಕ್ತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು' ಎಂದು ವಿದೇಶಾಂಗ ಸಚಿವಾಲಯ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಬ್ರೂನೈ ಭೇಟಿ ಪೂರ್ಣಗೊಳಿಸಿ ಸಿಂಗಾಪುರಕ್ಕೆ ತೆರಳುವ ಮೊದಲು ಪ್ರಧಾನಿ ಮೋದಿ ಅವರು ಬ್ರೂನೈ ಭೇಟಿಯು ಫಲಪ್ರದವಾಗಿದೆ. ಭೂಮಂಡಲಕ್ಕೆ ಉತ್ತಮ ಕೊಡುಗೆ ನೀಡುವ ರೀತಿಯಲ್ಲಿ ಉಭಯ ರಾಷ್ಟ್ರಗಳ ಸಂಬಂಧಗಳ ಹೊಸ ಯುಗ ಪ್ರಾರಂಭವಾಗಲಿದೆ ಎಂದು ಬಣ್ಣಿಸಿದರು.
ಹೂಡಿಕೆ ಆಕರ್ಷಿಸಲು ಸಿಂಗಪುರಕ್ಕೆ ಮೋದಿ
ಸಿಂಗಪುರ: ಭಾರತ-ಸಿಂಗಪುರದ ಸ್ನೇಹ ವೃದ್ಧಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿಗೆ ಆಗಮಿಸಿದ್ದಾರೆ.
ಮೋದಿ ಅವರು ಗುರುವಾರ ಸಂಸತ್ ಭವನದಲ್ಲಿ ಅಧಿಕೃತ ಸ್ವಾಗತವನ್ನು ಸ್ವೀಕರಿಸಲಿದ್ದಾರೆ. ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಲಿದ್ದಾರೆ.
ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡಿರುವ ಮೋದಿ ಅವರು ಈ ವೇಳೆ ಸಿಂಗಪುರದ ನಾಯಕತ್ವದ ಮೂರು ತಲೆಮಾರುಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಎಂದು ನವದೆಹಲಿಯ ಅಧಿಕಾರಿಗಳು ತಿಳಿಸಿದ್ದಾರೆ.
'ಉಭಯ ದೇಶಗಳ ಸ್ನೇಹ ವೃದ್ಧಿಸುವ ಉದ್ದೇಶದಿಂದ ವಿವಿಧ ಸಭೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತದಲ್ಲಿ ಆಗಿರುವ ಸುಧಾರಣೆಗಳು ಮತ್ತು ನಮ್ಮ ಯುವ ಶಕ್ತಿಯ ಪ್ರತಿಭೆ ನಮ್ಮ ರಾಷ್ಟ್ರವನ್ನು ಒಂದು ಆದರ್ಶ ಹೂಡಿಕೆಯ ತಾಣವನ್ನಾಗಿಸಿದೆ. ನಾವು ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಸಹ ಎದುರು ನೋಡುತ್ತಿದ್ದೇವೆ' ಎಂದು ಮೋದಿ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು ಸಿಂಗಪುರಕ್ಕೆ ನೀಡಿರುವ ಈ ಭೇಟಿಯು ಐದನೆಯದು.