HEALTH TIPS

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಹಳೇ ಕಾನೂನು ಬದಲಾಯಿಸಲು ಕ್ರಮ-ಸ್ಥಳೀಯ ಅದಾಲತ್‍ನಲ್ಲಿ ಸಚಿವ ಎಂ.ಬಿ. ರಾಜೇಶ್ ಹೇಳಿಕೆ

        ಕಾಸರಗೋಡು: ಸ್ಥಳೀಯಾಡಳಿತ ಮೂಲಕ ಲಭ್ಯವಾಗಿರುವ ದೂರುಗಳು ಮತ್ತು ಅರ್ಜಿಗಳು ಹಳೇ ಕಾನೂನುಗಳನ್ನು ಪರಿಷ್ಕರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಸ್ಥಳೀಯಾಡಳಿತ ಹಾಗೂ ಅಬಕಾರಿ ಖಾತೆ ಸಚಿವ ಎಂ.ಬಿ. ರಾಜೇಶ್ ಹೇಳಿದರು. 

          ಅವರು ಕಾಸರಗೋಡು ನಗರಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ಥಳೀಯಾಡಳಿತ ಅದಾಲತ್  ಉದ್ಘಾಟಿಸಿ ಮಾತನಾಡಿದರು. 

         ರಾಜ್ಯದಲ್ಲಿ ಇದುವರೆಗೆ ನಡೆದ ಅದಾಲತ್‍ಗಳಲ್ಲಿ 30 ಮಹತ್ವದ ನಿರ್ಣಯಗಳನ್ನು ಪ್ರಕಟಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮತ್ತು ಬಾಡಿಗೆ ಬಾಕಿಯನ್ನು ಚಕ್ರಬಡ್ಡಿ ದರದಲ್ಲಿ ವಸೂಲಿಮಾಡುವುದನ್ನು ನಿಲ್ಲಿಸಲಾಗುವುದು. ಇದರ ಬದಲು ಎಲ್ಲೆಡೆ ನಿಯಮಿತ ಬಡ್ಡಿ ಮಾತ್ರ ವಿಧಿಸಲಾಗುವುದು. 


          ಮಾನದಂಡ ಪಾಲಿಸಿ ಕಟ್ಟಡ ನಿರ್ಮಿಸಿದ್ದಲ್ಲಿ, ಪ್ಲೋಟ್ ಏರಿಯಾ ಹೆಚ್ಚು ಅಥವಾ ಕಡಿಮೆಯಾಗಿದೆ  ಎಂಬ ಕಾರಣಕ್ಕೆ   ಪರವಾನಿಗೆ ರದ್ದು ಮಾಡುವ ನಿಯಮವನ್ನು ಸಡಿಲಗೊಳಿಸಲಾಗುವುದು.  ಪರವಾನಿಗೆ ಪಡೆದು ಮನೆಗಳನ್ನು ನಿರ್ಮಿಸಿದ ಸಂದರ್ಭಗಳಲ್ಲಿ ಮತ್ತು ವಾಸ್ತವ್ಯವಿರುವ ಸಮಯದಲ್ಲಿ ಕಾನೂನು ಉಲ್ಲಂಘನೆ ಗಮನಕ್ಕೆ ಬಂದಲ್ಲಿ ಸಾಮಾನ್ಯ ವಿಧಾನವನ್ನು ಅಳವಡಿಸಿಕೊಂಡು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. 

       ಮಹಾನಗರಪಾಲಿಕೆ, ನಗರಸಭಾ ವ್ಯಾಪ್ತಿಯಲ್ಲಿ ಎರಡು ಸೆಂಟ್ಸ್‍ವರೆಗಿನ ಜಮೀನಿನಲ್ಲಿ 100 ಚದರ ಮೀಟರ್‍ವರೆಗಿನ ಮನೆಗಳ ಮುಂದೆ ನಿರ್ಮಿಸಬೇಕಾಗಿರುವ ಮೂರು ಮೀ. ಹಾದಿಯನ್ನು ಒಂದು ಮೀಟರ್‍ಗೆ ಕಡಿಮೆ ಮಾಡಲು ಬೈಲಾ ತಿದ್ದುಪಡಿ ಮಾಡಲಾಗುವುದು. ವಸತಿಗೆ ಸೂಕ್ತವಾದ ಬೇರೆ ಯಾವುದೇ ಭೂಮಿಯನ್ನು ಹೊಂದಿರದ ಕುಟುಂಬಗಳಿಗೆ ಷರತ್ತುಗಳಿಗೆ ಒಳಪಟ್ಟು ಈ ವಿನಾಯಿತಿಯನ್ನು ನೀಡಲಾಗುವುದು. ಕಟ್ಟಡ ನಿಯಮಗಳು ಜಾರಿಗೆ ಬರುವ ಮೊದಲು ನಿರ್ಮಿಸಲಾದ ಕಟ್ಟಡಗಳಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರ ಸಂಸ್ಥೆಗಳಿಗೆ ಪರವಾನಗಿ ನವೀಕರಣವನ್ನು ಮುಂದುವರಿಸಲಾಗುವುದಾಗಿಯೂ ಸಚಿವರು ತಿಳಿಸಿದರು.

        ಶಾಸಕ ಎನ್.ಎ.ನೆಲ್ಲಿಕುಂಞ ಅಧ್ಯಕ್ಷತೆ ವಹಿಸಿದ್ದರು.  ಶಾಸಕರಾದ ಇ.ಚಂದ್ರಶೇಖರನ್, ವಕೀಲ ಸಿ.ಎಚ್ ಕುಞಂಬು,  ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಗ್ರಾಮ ಪಂಚಾಯಿತಿ ಅಸೋಸಿಯೇಶನ್ ಕಾರ್ಯದರ್ಶಿ, ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಎಪಿ ಉಷಾ, ನಗರಸಭಾ ಚೇಂಬರ್ ಪ್ರತಿನಿಧಿ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ. ಶಾಂತಾ,  ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ. ಲಕ್ಷ್ಮಿ  

 ಎಲ್‍ಎಸ್‍ಜಿಡಿ ವಿಶೇಷ ಕಾರ್ಯದರ್ಶಿ ಟಿ.ವಿ.ಅನುಪಮಾ, ಪ್ರಧಾನ ನಿರ್ದೇಶಕಿ ಸೀರಂ ಸಾಂಬಶಿವ ರಾವ್, ನಗರ ನಿರ್ದೇಶಕ ಸೂರಜ್ ಶಾಜಿ, ಎಲ್‍ಎಸ್‍ಜಿಡಿ ಗ್ರಾಮೀಣ ನಿರ್ದೇಶಕ ದಿನೇಶನ್ ಚೆರುವಾಟ್,  ಹೆಚ್ಚುವರಿ ನಿರ್ದೇಶಕ ಇ.ಕೆ.ಬಾಲರಾಜ್, ಮುಖ್ಯ ಎಂಜಿನಿಯರ್ ಕೆ.ಜಿ.ಸಂದೀಪ್, ಮುಖ್ಯ ನಗರ ಯೋಜಕ ಶಿಜಿ ಇ ಚಂದ್ರನ್ ಮೊದಲಾದವರು  ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.  ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು. ಪಂಚಾಯಿತಿ ಉಪ ನಿರ್ದೇಶಕ ಜೇಸನ್ ಮ್ಯಾಥ್ಯೂ ವಂದಿಸಿದರು.

ಸಚಿವ ಸಂಪುಟದ ಮೂರನೇ ವರ್ಷಾಚರಣೆ ಅಂಗವಾಗಿ 100 ದಿನಗಳ ಕಾರ್ಯಕ್ರಮದನ್ವಯ ಅದಾಲತ್ ಆಯೋಜಿಸಲಾಗಿತ್ತು. 

ನಿರಾಳರಾದ ದೂರುದಾರರು:

          ಹಲವು ಸಮಯದಿಂದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದೂರು ಸಲ್ಲಿಸಿ ಪರಿಹಾರಕ್ಕಾಗಿ ಕಾದು ನಿಂತಿದ್ದ ಅದೆಷ್ಟೋ ಮಂದಿ ದೂರುದಾರರಿಗೆ ಅದಾಲತ್‍ನಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು. ಕಟ್ಟಡ ನಿರ್ಮಾಣ, ಪಿಂಚಣಿಗೆ ಸಂಬಂಧಿಸಿದ ಮಸ್ಟರಿಂಗ್ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಸಚಿವರು ನಡೆಸಿದ ಅದಾಲತ್‍ನಲ್ಲಿ ಪರಿಹಾರ ಕಂಡುಕೊಂಡು ದೂರುದಾರರು ನಿರಾಳರಾಗಿ ತೆರಳುವಂತಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries