ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ನಾಲ್ವರು ಸಿಬ್ಬಂದಿ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ದೇವ್‌ಸರ್ ಪ್ರದೇಶದ ಅಧಿಗಾಮ್ ಗ್ರಾಮದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.
ಕುಲ್ಗಾಮ್ ಜಿಲ್ಲೆಯ ಅಡಿಗಾಂ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಭದ್ರತಾ ಪಡೆಗಳು ಶಂಕಿತ ಸ್ಥಳ ಸಮೀಸುತ್ತಿದ್ದಂತೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ನಾಲ್ವರು ಯೋಧರಿಗೆ ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತಗಳಲ್ಲಿ ಚುನಾವಣೆ ಮುಕ್ತಾಯಗೊಂಡಿದೆ. ಅಕ್ಟೋಬರ್ 1ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.