ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ವೈದ್ಯರು ಇಂದು (ಶುಕ್ರವಾರ) ಧರಣಿ ನಿರತರಾಗಿದ್ದಾರೆ.
ಪ್ರತಿಭಟನಾನಿರತ ವೈದ್ಯರು ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಗುರುವಾರ ನಿಗದಿಯಾಗಿದ್ದ ಮಾತುಕತೆ ನಡೆಯಲಿಲ್ಲ. ಇದರಿಂದ ವೈದ್ಯರ ಬಿಕ್ಕಟ್ಟು ಮುಂದುವರಿದಿದೆ.
ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆಯನ್ನು ಕಿರಿಯ ವೈದ್ಯರು ಮುಂದಿಟ್ಟಿದ್ದಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
'ಕಿರಿಯ ವೈದ್ಯರ ಬೇಡಿಕೆಯಿಂತೆ ಮಾತುಕತೆಯನ್ನು ನೇರ ಪ್ರಸಾರ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರಕರಣ ಸುಪ್ರಿಂ ಕೋರ್ಟ್ ವಿಚಾರಣೆ ಹಂತದಲ್ಲಿದೆ. ಅಗತ್ಯವಿದ್ದರೆ ಸುಪ್ರಿಂ ಕೋರ್ಟ್ ಅನುಮತಿಯೊಂದಿಗೆ ವಿಡಿಯೊ ರೆಕಾರ್ಡಿಂಗ್ ಮಾಡಿ ಕಿರಿಯ ವೈದ್ಯರಿಗೆ ಹಸ್ತಾಂತರ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಆದರೆ ತಮ್ಮ ಬೇಡಿಕೆ ಈಡೇರುವವರೆಗೂ ಸಾಲ್ಟ್ ಲೇಕ್‌ನಲ್ಲಿರುವ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ 'ಸ್ವಾಸ್ಥ್ಯ ಭವನ'ದ ಹೊರಗಡೆ ಪ್ರತಿಭಟನ ಮುಂದುವರಿಯಲಿದೆ ಎಂದು ಧರಣಿ ನಿರತ ವೈದ್ಯರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರ ಅಮಾನತು ವಿವಿಧ ಭೇಡಿಕೆಗಳನ್ನು ಪ್ರತಿಭಟನಾನಿರತ ಕಿರಿಯ ವೈದ್ಯರು ಮುಂದಿಟ್ಟಿದ್ದಾರೆ.
'ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಸಂತ್ರಸ್ತೆಗೆ ನ್ಯಾಯ ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಸಿಗುವಂತಾಗಬೇಕು. ಕರ್ತವ್ಯಕ್ಕೆ ಹಾಜರಾಗದಿರುವ ವೈದ್ಯರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ