ಕುಂಬಳೆ : ಚಿನ್ನ ಖರೀದಿ ಸೋಗಿನಲ್ಲಿ ಕುಂಬಳೆಯ ಜ್ಯುವೆಲ್ಲರಿಯೊಂದಕ್ಕೆ ಆಗಮಿಸಿದ ಫರ್ಧಾಧಾರಿ ಮಹಿಳೆ, ಒಂದು ಪವನು ತೂಕದ ಬ್ರೇಸ್‍ಲೆಟ್ ಕಳವುಗೈದು ಪರಾರಿಯಾಗಿದ್ದಾಳೆ. ಮಹಿಳೆ ಚಲನವಲನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಈಕೆ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಚಿನ್ನದಂಗಡಿ ಮಾಲಿಕ ಹಮೀದ್ ಅವರ ದೂರಿನ ಮೇರೆಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸೋಮವಾರ ಚಿನ್ನಖರೀದಿ ನೆಪದಲ್ಲಿ ಆಗಮಿಸಿದ ಬುರ್ಖಾಧಾರಿ ಮಹಿಳೆ, ಹಲವು ಬ್ರೇಸ್‍ಲೆಟ್ ಪರಿಶೀಲಿಸಿದ್ದಾಳೆ. ಚಿನ್ನದ ದರವನ್ನೂ ಕೇಳಿಕೊಂಡಿದ್ದಾಳೆ. ಬಹಳ ಹೊತ್ತಿನ ನಂತರ ಕೈಯಲ್ಲಿ ಸಾಕಷ್ಟು ಹಣವಿಲ್ಲದಿರುವುದರಿಂದ ಮತ್ತೆ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟಿದ್ದಾಳೆ.
ರಾತ್ರಿ ವೇಳೆ ಚಿನ್ನಾಭರಣ ಅಂಗಡಿ ಸಿಬ್ಬಂದಿ ಚಿನ್ನಾಭರಣಗಳನ್ನು ಪರಿಶೀಲಿಸಿ ತಿಜೋರಿಯಲ್ಲಿರಿಸಲು ಮುಂದಾಗುತ್ತಿದ್ದಂತೆ ಒಂದು ಪವನು ತೂಕದ ಬ್ರೇಸ್‍ಲೆಟ್ ಕಾಣೆಯಾಗಿತ್ತು. ತಕ್ಷಣ ಸಿಸಿ ಕ್ಯಾಮರಾ ಫೂಟೇಜ್ ತಪಾಸಣೆ ನಡೆಸಿದಾಗ ಬ್ರೇಸ್‍ಲೆಟ್ ಖರೀದಿ ಸೋಗಿನಲ್ಲಿ ಆಗಮಿಸಿದ್ದ ಮಹಿಳೆ ಚಿನ್ನಾಭರಣ ಎಗರಿಸಿರುವ ದೃಶ್ಯ ದಾಖಲಾಗಿತ್ತು. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಫೂಟೇಜ್ ವಶಪಡಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.