ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿದ್ದಾರೆ.
'ಪ್ರತಿಭಟನೆನಿರತ ವೈದ್ಯರು ಮಂಗಳವಾರ ಸಂಜೆ 5ರ ಒಳಗಾಗಿ ಕರ್ತವ್ಯಕ್ಕೆ ಮರಳಬೇಕು.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನನಿರತ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. 'ನಿಮ್ಮ ಸಣ್ಣ ನಿಯೋಗವು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಲು ಸಚಿವಾಲಯಕ್ಕೆ ಬರಬಹುದು' ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್.ಎಸ್.ನಿಗಮ್ ಅವರು ಇ-ಮೇಲ್ ಮೂಲಕ ವೈದ್ಯರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಿರಿಯ ವೈದ್ಯರೊಬ್ಬರು, 'ನಿಗಮ್ ಅವರ ರಾಜೀನಾಮೆಗೆ ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಇದೀಗ ಅವರಿಂದ ಇ-ಮೇಲ್ ಕಳುಹಿಸಿ ನಮಗೆ ಅವಮಾನ ಮಾಡಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಕೋಲ್ಕತ್ತ ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಮಂಗಳವಾರ ಸಂಜೆ 5ರ ಒಳಗಾಗಿ ಅಮಾನತು ಮಾಡಬೇಕು ಎಂದು ಸರ್ಕಾರವನ್ನು ಕೇಳಿಕೊಂಡಿದ್ದೆವು' ಎಂದು ಮುಷ್ಕರ ನಿರತ ವೈದ್ಯರು ಹೇಳಿದ್ದಾರೆ.
51 ವೈದ್ಯರಿಗೆ ನೋಟಿಸ್: ಭಯದ ವಾತಾವರಣ ಸೃಷ್ಟಿಸಿದ ಮತ್ತು ಸಂಸ್ಥೆಯ ಪ್ರಜಾಸತ್ತಾತ್ಮಕ ವಾತಾವರಣಕ್ಕೆ ಧಕ್ಕೆ ತಂದ ಆರೋಪದಲ್ಲಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ತನ್ನ 51 ವೈದ್ಯರಿಗೆ ನೋಟಿಸ್ ಜಾರಿಗೊಳಿಸಿದ್ದು, ಸೆಪ್ಟೆಂಬರ್ 11 ರಂದು ತನಿಖಾ ಸಮಿತಿ ಮುಂದೆ ಹಾಜರಾಗಲು ಸೂಚಿಸಿದೆ.