HEALTH TIPS

ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಕೊಲೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ

 ಕೋಲ್ಕತ್ತ: ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು, ಬಿಕ್ಕಟ್ಟು ಶಮನಕ್ಕೆ ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

'ಹೇಯ ಕೃತ್ಯಕ್ಕೆ ಬಲಿಯಾದ ನಮ್ಮ ಸಹೋದ್ಯೋಗಿಗೆ ನ್ಯಾಯ ಒದಗಿಸಲು ನೀವು ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡುತ್ತೇವೆ. ಹಾಗಾದಲ್ಲಿ ನಮಗೆ ಯಾವುದೇ ಭಯವಿಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

'ಈ ಸಂಕಷ್ಟದ ಸಮಯದಲ್ಲಿ ನಿಮ್ಮ ಮಧ್ಯಪ್ರವೇಶವು ನಮಗೆ ಭರವಸೆಯ ಬೆಳಕಾಗಿ ಪರಿಣಮಿಸಲಿದೆ. ನಮ್ಮನ್ನು ಆವರಿಸಿರುವ ಕತ್ತಲೆಯಿಂದ ಹೊರಬರಲು ದಾರಿಯನ್ನು ತೋರಿಸಲಿದೆ' ಎಂದಿದ್ದಾರೆ.

ಮುಂದುವರಿದ ಧರಣಿ: ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಯ ಬಳಿ ಕಿರಿಯ ವೈದ್ಯರು ನಡೆಸುತ್ತಿರುವ ಧರಣಿ ಸತತ ಮೂರನೇ ದಿನವೂ ಮುಂದುವರಿಯಿತು.

ಬಿಕ್ಕಟ್ಟು ಬಗೆಹರಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಿರಿಯ ವೈದ್ಯರ ಮಧ್ಯೆ ಗುರುವಾರ ನಡೆಯಬೇಕಿದ್ದ ಮಾತುಕತೆ ಮುರಿದುಬಿದ್ದಿತ್ತು.

ಬಂಗಾಳದ 26 ವೈದ್ಯಕೀಯ ಕಾಲೇಜುಗಳನ್ನು ಪ್ರತಿನಿಧಿಸುವ ಸುಮಾರು 30 ವೈದ್ಯರು ಮಾತುಕತೆಗಾಗಿ ಮುಖ್ಯಮಂತ್ರಿ ಅವರ ನಿವಾಸಕ್ಕೆ ಬಂದಿದ್ದರು. ಆದರೆ, ಸಂಧಾನ ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ವೈದ್ಯರ ಷರತ್ತಿಗೆ ಸರ್ಕಾರ ಒಪ್ಪಿಕೊಳ್ಳದ ಕಾರಣ ಸಭೆ ನಡೆಯಲಿಲ್ಲ.

ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಮಾತುಕತೆಯ ನೇರ ಪ್ರಸಾರ ಸಾಧ್ಯವಿಲ್ಲ ಎಂದು ಮಮತಾ ಅವರು ಹೇಳಿದ್ದರು. ಸಭೆಯ ವಿಡಿಯೊ ರೆಕಾರ್ಡ್‌ ಮಾಡಲು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದು, ಸುಪ್ರೀಂ ಕೋರ್ಟ್‌ ಅನುಮತಿ ನೀಡಿದರೆ ಅದನ್ನು ವೈದ್ಯರಿಗೆ ನೀಡಲಾಗುವುದು ಎಂದಿದ್ದರು.

ಸ್ವಾಸ್ಥ್ಯ ಭವನದ (ಆರೋಗ್ಯ ಇಲಾಖೆಯ ಕಚೇರಿ) ಬಳಿ ನಡೆಯುತ್ತಿರುವ ಧರಣಿಯು ಎಲ್ಲ ಬೇಡಿಕೆಗಳು ಈಡೇರುವವರೆಗೂ ಮುಂದುವರಿಯಲಿದೆ ಎಂದು ಪ್ರತಿಭಟನೆನಿರತ ವೈದ್ಯರು ಹೇಳಿದ್ದಾರೆ.

₹ 2 ಲಕ್ಷ ಪರಿಹಾರ: ವೈದ್ಯರ ಮುಷ್ಕರದ ಕಾರಣ ಸೂಕ್ತ ಚಿಕಿತ್ಸೆ ಲಭಿಸದೆ ಮೃತಪಟ್ಟ 29 ಮಂದಿಯ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಮಂಪರು ಪರೀಕ್ಷೆ

ಸಿಬಿಐ ಮನವಿ ತಿರಸ್ಕರಿಸಿದ ನ್ಯಾಯಾಲಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ ಆರೋಪಿ ಸಂಜಯ್ ರಾಯ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಸಿಬಿಐ ಮಾಡಿದ ಮನವಿಯನ್ನು ಸ್ಥಳೀಯ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. 'ಮಂಪರು ಪರೀಕ್ಷೆಗೆ ಒಳಗಾಗಲು ರಾಯ್‌ ಒಪ್ಪಿಕೊಂಡಿದ್ದ. ಆದರೆ ನ್ಯಾಯಾಧೀಶರು ಕೇಳುವಾಗ ಪರೀಕ್ಷೆಗೆ ಒಳಗಾಗುವುದಿಲ್ಲ ಎಂದಿದ್ದಾನೆ' ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಯ್ ನೀಡುತ್ತಿರುವ ಹೇಳಿಕೆಗಳು ಸತ್ಯವೇ ಎಂಬುದನ್ನು ಪರಿಶೀಲಿಸಲು ಮಂಪರು ಪರೀಕ್ಷೆಗೆ ಒಳಪಡಿಸಲು ಸಿಬಿಐ ನಿರ್ಧರಿಸಿತ್ತು. ತನಿಖಾ ತಂಡ ಆರೋಪಿಯನ್ನು ಈಗಾಗಲೇ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದೆ.

'ಆರೋಪ ಪಟ್ಟಿ ಸಲ್ಲಿಕೆ ವಿಳಂಬ ಏಕೆ?'

ನವದೆಹಲಿ: ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ವಿಳಂಬ ಮಾಡುತ್ತಿರುವುದನ್ನು ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್‌ ಒಬ್ರಯಾನ್‌ ಪ್ರಶ್ನಿಸಿದ್ದಾರೆ. 'ಸಂತ್ರಸ್ತೆಯ ಕುಟುಂಬವು ನ್ಯಾಯಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು? ಆರೋಪಿಗಳು ಯಾರು ಎಂಬುದು ಸಿಬಿಐಗೆ ಗೊತ್ತಿದೆ. ಎಲ್ಲ ಸಾಕ್ಷ್ಯಗಳೂ ಅವರ ಬಳಿ ಇದೆ. ಆದರೂ ಆರೋಪ ಪಟ್ಟಿ ಸಲ್ಲಿಸುತ್ತಿಲ್ಲ ಏಕೆ? ವಿಚಾರಣೆಯನ್ನು ವಿಳಂಗೊಳಿಸುತ್ತಿರುವುದು ಏಕೆ? ನಮಗೆ ತ್ವರಿತ ನ್ಯಾಯ ಬೇಕು' ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries