ನವದೆಹಲಿ: ಎಡಪಕ್ಷಗಳ ಪ್ರಮುಖ ನಾಯಕ ಹಾಗೂ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಮ ಯೆಚೂರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
'ನ್ಯುಮೊನಿಯಾದಿಂದ ಬಳಲುತ್ತಿದ್ದ ಯೆಚೂರಿ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಯೆಚೂರಿ ಅವರನ್ನು ಆ. 19ರಂದು ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಶಿಕ್ಷಣ ಹಾಗೂ ಸಂಶೋಧನೆಯ ಉದ್ದೇಶದಿಂದ ಮೃತದೇಹವನ್ನು ಯೆಚೂರಿ ಅವರ ಕುಟುಂಬ ಆಸ್ಪತ್ರೆಗೆ ದಾನ ಮಾಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಯೆಚೂರಿ ಅವರಿಗೆ ಪತ್ನಿ ಸೀಮಾ ಚಿಷ್ತಿ, ಮಗಳು ಅಖಿಲಾ ಹಾಗೂ ಮಗ ಡ್ಯಾನಿಶ್ ಇದ್ದಾರೆ. ಇವರಿಗಿದ್ದ ಮತ್ತೊಬ್ಬ ಪುತ್ರ ಆಶಿಶ್ ಯೆಚೂರಿ ಅವರು (34) 2021ರಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಯೆಚೂರಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಇಂಡಿಯಾ ಎಂಬ ಪರಿಕಲ್ಪನೆಯ ರಕ್ಷಕರಾಗಿದ್ದ ಅವರು ನಮ್ಮ ದೇಶದ ಕುರಿತು ಆಳವಾದ ಜ್ಞಾನ ಹೊಂದಿದ್ದರು. ಅವರೊಂದಿಗಿನ ಸುದೀರ್ಘ ಚರ್ಚೆಗಳ ನೆನಪುಗಳು ನನ್ನನ್ನು ಕಾಡುತ್ತಿವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ' ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಪಿಎಂನ ಕೇಂದ್ರ ಸಮಿತಿಯಾದ ಪಾಲಿಟ್ ಬ್ಯೂರೊದಲ್ಲಿ ಕಳೆದ ಮೂರು ದಶಕಗಳಿಂದ ಯೆಚೂರಿ ಅವರು ಸದಸ್ಯರಾಗಿದ್ದರು. 2005ರಿಂದ 2017ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.
ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಹಾಗೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಯೆಚೂರಿ, ವಿದ್ಯಾರ್ಥಿ ದಿಸೆಯಿಂದಲೇ ರಾಜಕೀಯ ಪ್ರವೇಶಿಸಿದವರು. 1975ರಲ್ಲಿ ಸಿಪಿಐಎಂ ಸೇರಿದರು. ಸಂಶೋಧನಾ ವಿದ್ಯಾರ್ಥಿಯಾಗಿದ್ದ ಅವಧಿಯಲ್ಲೇ ದೇಶದಲ್ಲಿ ಜಾರಿಗೆ ಬಂದಿದ್ದ ತುರ್ತು ಪರಿಸ್ಥಿತಿಯಲ್ಲಿ ಜೈಲು ಪಾಲಾಗಿದ್ದರು. ಅಲ್ಲಿಂದ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ ಅವರು, ಪಿಎಚ್‌ಡಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಜೈಲಿನಿಂದ ಹೊರ ಬಂದ ನಂತರ ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕರಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಯೆಚೂರಿ ಅವರು ಪ್ರಕಾಶ್ ಕಾರಟ್ ಅವರ ಸಂಪರ್ಕಕ್ಕೆ ಬಂದರು. 1992ರಲ್ಲಿ ಪಾಲಿಟ್ ಬ್ಯೂರೊ ಸದಸ್ಯರಾಗಿ ನೇಮಕಗೊಂಡರು. ಯಪಿಎ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಯೋಜನೆಯ ರೂಪುರೇಷೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2004ರಲ್ಲಿ ಯುಪಿಎ ಸರ್ಕಾರ ರಚನೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ರಚನೆಯಲ್ಲೂ ಯೆಚೂರಿ ಅವರು ಮುಂಚೂಣಿಯಲ್ಲಿದ್ದರು.