ಮಾಲೆ: 'ದ್ವೀಪ ರಾಷ್ಟ್ರದಲ್ಲಿ ವಿದೇಶಿ ಸೇನೆ ಇರುವುದು ದೇಶಕ್ಕೆ ಗಂಭೀರ ಸಮಸ್ಯೆಯಾಗಿದೆ. ಹಾಗೆಂದ ಮಾತ್ರಕ್ಕೆ, ಭಾರತ ಹೊರಹೋಗಲಿ ಎಂಬ ಕಾರ್ಯಸೂಚಿಯನ್ನು ಎಂದಿಗೂ ನಾವು ಹೊಂದಿಲ್ಲ' ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸ್ಪಷ್ಟಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ನಾವು ಯಾವುದೇ ಹಂತದಲ್ಲೂ ಯಾವುದೇ ರಾಷ್ಟ್ರದ ವಿರೋಧಿಯಲ್ಲ. ಭಾರತವನ್ನು ದೇಶ ಬಿಟ್ಟು ಹೋಗಿ ಎಂದು ಹೇಳಿಲ್ಲ. ಬದಲಿಗೆ, ಮಾಲ್ದೀವ್ಸ್ ನೆಲದಲ್ಲಿರುವ ವಿದೇಶಿ ಸೇನೆಯಿಂದ ಸಾಕಷ್ಟು ಸಮಸ್ಯೆ ಎದುರಿಸಲಾಗುತ್ತಿತ್ತು. ಹೀಗಾಗಿ ವಿದೇಶದ ಒಬ್ಬ ಸೈನಿಕನೂ ದೇಶದಲ್ಲಿರಬಾರದು ಎಂಬ ನಿಲುವನ್ನು ಮಾಲ್ದೀವ್ಸ್‌ನ ಪ್ರಜೆಗಳು ಹೊಂದಿದ್ದರು' ಎಂದು ಹೇಳಿರುವುದಾಗಿ ಮಾಲ್ದೀವ್ಸ್‌ನ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾಲ್ದೀವ್ಸ್ ಚೀನಾ ಪರ ನಿಲುವು ತಾಳುತ್ತಿದ್ದಂತೆ, ಭಾರತದೊಂದಿಗಿನ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಹಳಸಿತ್ತು. ಮುಯಿಝು ಅವರು ಅಧ್ಯಕ್ಷರಾದ ನಂತರ ಇದು ಇನ್ನೂ ಹೆಚ್ಚಾಯಿತು.
ಭಾರತವು ಮಾಲ್ದೀವ್ಸ್‌ಗೆ ಉಡುಗೊರೆಯಾಗಿ ನೀಡಿದ್ದ ಮೂರು ವಿಮಾನಗಳ ನಿರ್ವಹಣೆಗೆ ಇದ್ದ 90 ಭಾರತೀಯ ಸೈನಿಕರನ್ನು ಮರಳಿ ಕರೆಯಿಸಿಕೊಳ್ಳುವಂತೆ ಮುಯಿಝು ಭಾರತಕ್ಕೆ ಸೂಚಿಸಿದ್ದರು. ಅದರಂತೆಯೇ ಮೇ 10ರಂದು ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಂಡಿದ್ದ ಭಾರತ, ಮಾಲ್ದೀವ್ಸ್‌ನಲ್ಲಿರುವ ಡಾರ್ನೀರ್ ವಿಮಾನ ಹಾಗೂ ಎರಡು ಹೆಲಿಕಾಪ್ಟರ್‌ಗಳ ನಿರ್ವಹಣೆಗೆ ನಾಗರಿಕರನ್ನು ಕಳುಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಮಾನಿಸಿದ ಮಾಲ್ದೀವ್ಸ್‌ನ ಸಚಿವರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಮುಯಿಝು ಹೇಳಿದ್ದಾರೆ.
'ಯಾವುದೇ ವ್ಯಕ್ತಿಯ ವಿರುದ್ಧ ಅಂಥ ನಿಂದನೆಯ ಮಾತುಗಳನ್ನು ನಾನು ಸಹಿಸುವುದಿಲ್ಲ. ಅವರು ಪ್ರಮುಖ ನಾಯಕರೇ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯೇ ಆಗಿರಲಿ. ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಇರುತ್ತದೆ. ಹೀಗಾಗಿ ಮೋದಿ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇನೆ' ಎಂದಿದ್ದಾರೆ.
ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದನ್ನು ಟೀಕಿಸಿದ್ದ ಮಾಲ್ದೀವ್ಸ್‌ನ ಸಚಿವರೊಬ್ಬರು, ಭಾರತವು ತನ್ನ ಕೇಂದ್ರಾಡಳಿತ ಪ್ರದೇಶವನ್ನು ಮಾಲ್ದೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶ ಹೊಂದಿದ್ದಾರೆ ಎಂದಿದ್ದರು. ನರೇಂದ್ರ ಮೋದಿ ಅವರು ಜ. 2 ಹಾಗೂ 3ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು.