ಕಾಸರಗೋಡು: ಜಿಲ್ಲೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಚಟುವಟಿಕೆಗಳಿಗೆ ಬ್ಯಾಂಕ್‍ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಪರಿಶೀಲನಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳೊಂದಿಗೆ ಮುಂದಡಿಯಿಡುತ್ತಿದ್ದರೂ, ಇಂತಹ ಉದ್ಯಮಿಗಳೊಂದಿಗೆ ಬ್ಯಾಂಕ್ ಅಧಿಕಾರಿಗಳ ಸಾಮೀಪ್ಯದಲ್ಲಿ ಒಂದಷ್ಟು ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಜಿಲ್ಲೆಯ 40ನೇ ವರ್ಷಾಚರಣೆ ಅಂಗವಾಗಿ 400 ಮನೆಗಳನ್ನು ನಿರ್ಮಿಸಿ ನೀಡಲು ಜಿಲ್ಲಾ ಪಂಚಾಯಿತಿ ಯೋಜನೆಗೆ ಮುಂದಾಗಿದೆ. ಇದಕ್ಕಾಗಿ ಬ್ಯಾಂಕ್‍ಗಳ ಸಿಎಸ್‍ಆರ್ ಫಂಡ್‍ನಿಂದ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಅಕ್ಷಯ ಮ್ಯಾಟ್ರಿಮೋನಿಯಲ್ ಆರಂಭಿಸಲು ಸಿದ್ಧತೆ ನಡೆಸಿದ್ದು, ಅಗತ್ಯ ಪ್ರಚಾರ ಕಾರ್ಯಗಳಿಗೆ ಬ್ಯಾಂಕ್ ಗಳು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.
ಕೃಷಿ ಸಾಲದಲ್ಲಿ ಶೇ.28 ಸುಧಾರಣೆ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಶೇ.42, ಎಂಎಸ್‍ಎಂಇ ವಿಭಾಗದಲ್ಲಿ ಶೇ. 57, ಸೇವಾ ವಲಯದಲ್ಲಿ 28 ರಷ್ಟು ಸುಧಾರಣೆ ಸಾಧಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯಕ ಜಿಲ್ಲಾಧಿಕಾರಿ (ಆರ್ ಆರ್) ಕೆ.ರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಅಂಶುಮಾನ್ ಡಿ, ಶ್ಯಾಮ್ ಸುಂದರ್, ರಿಸರ್ವ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ಯಾಂಸುಂದರ್, ನಬಾರ್ಡ್ ಡಿಡಿಎಂ ಶರೋನ್‍ವಾಸ್ ಉಪಸ್ಥಿತರಿದ್ದರು. ಕಾಸರಗೋಡು ಲೀಡ್ ಬ್ಯಾಂಕ್ ಜಿಲ್ಲಾ ಪ್ರಬಂಧಕ ತಿಪ್ಪೇಶ್ ಸ್ವಾಗತಿಸಿದರು. ಹರೀಶ್ ವಂದಿಸಿದರು.