ಕಾಸರಗೋಡು: ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ವಿರುದ್ಧ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಅಪ್‍ಲೋಡ್ ಮಾಡಿದ್ದ ವೆಳ್ಳರಿಕುಂಡು ತಾಲೂಕು ಡೆಪ್ಯುಟಿ ಸಹಸೀಲ್ದಾರ್‍ನನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಕಾಞಂಗಾಡು ನಿವಾಸಿ, ವೆಳ್ಳರಿಕುಂಡು ತಾಲೂಕು ಡೆಪ್ಯುಟಿ ತಹಸೀಲ್ದಾರ್ ಎ.ಪವಿತ್ರನ್ ಅಮಾನತುಗೊಂಡ ಅಧಿಕಾರಿ. ಶಾಸಕ ಇ.ಚಂದ್ರಶೇಖರನ್ ವಿರುದ್ಧ ಆರೋಪಿ ಸೆ. 12ರಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹರಿಯಬಿಟ್ಟಿದ್ದನು. ಈ ಬಗ್ಗೆ ಶಾಸಕ ಇ.ಚಂದ್ರಶೇಖರನ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಇದಾದ ತಾಸಿನೊಳಗೆ ಈ ಪೋಸ್ಟನ್ನು ಹಿಂಪಡೆದುಕೊಂಡು, ತನ್ನಿಂದ ತಪ್ಪಾಗಿರುವುದಾಗಿ ಕ್ಷಮೆ ಯಾಚಿಸಿ ವಿವರಣೆ ನೀಡಿದ್ದನು. ಈ ಹಿಂದೆಯೂ ಈತ ಶಾಸಕರ ವಿರುದ್ಧ ಚಾರಿತ್ರ್ಯಹನನಮಾಡುವ ಪೋಸ್ಟ್ ಅಪ್‍ಲೋಡ್ ಮಾಡಿದ್ದ ಹಿನ್ನೆಲೆಯಲ್ಲಿ ಈತನಿಗೆ ಎಚ್ಚರಿಕೆ ನೀಡಲಾಗಿತ್ತೆನ್ನಲಾಗಿದೆ. ತಪ್ಪು ಮರುಕಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ. ಇದು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಂದಾಯ ಇಲಾಖೆಗೆ ಕಳಂಕ ತರುವ ಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.