ಜಿನೀವಾ: ಚೀನಾದೊಟ್ಟಿಗೆ ಇರುವ ಶೇ 75ರಷ್ಟು ಸಮಸ್ಯೆಗಳು ಇತ್ಯರ್ಥವಾಗಿವೆ. ಆದರೆ ಗಡಿಯಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸುತ್ತಿರುವುದೇ ದೊಡ್ಡ ಸಮಸ್ಯೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.
ಸ್ವಿಸ್ ನಗರದಲ್ಲಿ ಚಿಂತಕರ ಚಾವಡಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, 'ಜೂನ್ 2020ರಲ್ಲಿ ನಡೆದ ಗಲ್ವಾನ್ ಕಣಿವೆ ಸಂಘರ್ಷವು ಭಾರತ-ಚೀನಾ ಸಂಬಂಧದ ಮೇಲೆ ದುಷ್ಪರಿಣಾಮ ಬೀರಿದೆ.
'ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ನಾವೂ ನಿಯೋಜಿಸುತ್ತಿದ್ದೇವೆ. ಅತ್ಯಂತ ಎತ್ತರ ಮತ್ತು ತೀವ್ರ ಚಳಿ ಇರುವ ಪ್ರದೇಶದಲ್ಲಿ ಹೆಚ್ಚು ಸೈನಿಕರ ನಿಯೋಜನೆ ಅತ್ಯಂತ ಅಪಾಯಕಾರಿ ಬೆಳವಣಿಗೆ. 2020ರಲ್ಲಿ ಅಗಿದ್ದೂ ಇದೇ' ಎಂದು ತಿಳಿಸಿದರು.
ಗಡಿಯಲ್ಲಿ ಶಾಂತಿ ಸ್ಥಾಪನೆಯಾಗದ ಹೊರತು ಉಭಯ ದೇಶಗಳ ಸಂಬಂಧ ಸುಧಾರಣೆ ಅಸಾಧ್ಯ. ಈ ನಿಟ್ಟಿನಲ್ಲಿ ಒಂದಷ್ಟು ಪ್ರಗತಿಯಾಗುತ್ತಿದೆ ಎಂದೂ ಅವರು ಹೇಳಿದರು.
ಗಾಂಧಿ ಪ್ರತಿಮೆಗೆ ಜೈಶಂಕರ್ ನಮನ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಎರಡು ದಿನಗಳ ಕಾಲ ಸ್ವಿಟ್ಜರ್‌ಲೆಂಡ್‌ಗೆ ಭೇಟಿ ನೀಡಿದ್ದು ಮಹಾತ್ಮ ಗಾಂಧಿ ಪ್ರತಿಮೆಗೆ ಗುರುವಾರ ನಮನ ಸಲ್ಲಿಸಿದರು.
ಜೈಶಂಕರ್ ಅವರು ಮೂರು ದೇಶಗಳಿಗೆ ಪ್ರವಾಸ ಕೈಗೊಂಡಿದ್ದು ಜರ್ಮನಿಯಿಂದ ಸ್ವಿಟ್ಜರ್‌ಲೆಂಡ್‌ಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಅವರು ಅಂತರರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ವಿದೇಶಾಂಗ ವ್ಯವಹಾರಗಳ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
'ಮಹಾತ್ಮ ಗಾಂಧಿ ಅವರಿಗೆ ನಮಿಸುವ ಮೂಲಕ ಜಿನೀವಾ ಪ್ರವಾಸವನ್ನು ಆರಂಭಿಸಿದ್ದೇನೆ. ಜಗತ್ತಿನಾದ್ಯಂತ ಸಂಘರ್ಷ ಮತ್ತು ಧ್ರುವೀಕರಣ ನಡೆಯುತ್ತಿರುವ ಈ ಹೊತ್ತಿನಲ್ಲಿ ಬಾಪೂ ಅವರ ಸಾಮರಸ್ಯ ಮತ್ತು ಸಹಜೀವನ ಸಂದೇಶವು ಎಂದೆಂದಿಗಿಂತಲೂ ಈಗ ಹೆಚ್ಚು ಸಕಾಲಿಕವಾಗಿದೆ' ಎಂದು ಜೈಶಂಕರ್ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.