ಕುಂಬಳೆ: ಕುಂಬಳೆ ಮೂಲದ ಟ್ರಾವೆಲ್ ಮಾಲೀಕರ ವಿರುದ್ಧ ಕರ್ನಾಟಕದ ನಿವಾಸಿಗಳು ದೂರು ದಾಖಲಿಸಿದ್ದಾರೆ.ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಕರ್ನಾಟಕದ 24 ಯುವಕರು ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರಿನ ಹನ್ನೊಂದು ಮಂದಿಯ ತಂಡ ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ವಂಚನೆಗೊಳಗಾದ ವಿಚಾರವನ್ನು ಸ್ಪಷ್ಟಪಡಿಸಿದರು.
ಕುಂಬಳೆ ಮಾರ್ಕೆಟ್ ರಸ್ತೆಯ ಟ್ರಾವೆಲ್ ಮಾಲಕ ಸಾರ್ವಜನಿಕ ಕಾರ್ಯಕರ್ತ, ಅವರ ಪುತ್ರ ಹಾಗೂ ಕರ್ನಾಟಕ ಬಿ.ಸಿ.ರೋಡ್ ಮೂಲದ ನೌಕರನ ವಿರುದ್ಧ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.
ವೀಸಾಕ್ಕಾಗಿ ಒಬ್ಬ ವ್ಯಕ್ತಿಯಿಂದ 1,35,0000 ರೂ., ನಂತೆ ಟ್ರಾವೆಲ್ ಮಾಲೀಕರು ಪಡೆದಿದ್ದರು. ಮೂರು ಕಂತುಗಳಲ್ಲಿ ಹಣ ಪಾವತಿಸುವ ಕರಾರಿನಂತೆ ಮೊದಲ 55 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿರುವುದಾಗಿ ಯುವಕರು ತಿಳಿಸಿದ್ದಾರೆ.
ಆಗಸ್ಟ್ 28ರಂದು ಮಧ್ಯಾಹ್ನ 12.30ಕ್ಕೆ ತಿರುವನಂತಪುರದಿಂದ ಏರ್ ಏಷ್ಯಾ ವಿಮಾನದಲ್ಲಿ ಹನ್ನೆರಡು ಮಂದಿ ತೆರಳಿದ್ದರು.
ಇದು ಮಲೇಷಿಯಾ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಎಂದು ಹೇಳಲಾಗಿದೆ. ಅಲ್ಲಿಗೆ ತಲುಪಿದಾಗ ವೀಸಾ ಪೂರ್ಣವಾಗಿ ಮೋಸದ ಜಾಲದ್ದು ಎಂದು ಅರಿವಾಯಿತು.
ಪ್ರವಾಸಿ ವೀಸಾದಲ್ಲಿ ಮಲೇಷ್ಯಾಕ್ಕೆ ಬಂದ ಯುವಕರು ವಾಪಸಾತಿ ಟಿಕೆಟ್ ಹೊಂದಿಲ್ಲದ ಕಾರಣ ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗಲಿಲ್ಲ ಮತ್ತು ಮೂರು ದಿನ ಊಟವಿಲ್ಲದೆ ಕಳೆಯಬೇಕಾಯಿತು. ಅಂತಿಮವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ವಾಪಸ್ ಕಳುಹಿಸಿದರು ಎಂದು ಅವರು ಹೇಳಿದರು.
ವೀಸಾ ಹಾಗೂ ಉದ್ಯೋಗ ಕೊಡಿಸುವುದಾಗಿ ಹೇಳಿ ಹಲವರಿಂದ 1 ಲಕ್ಷದ ಐವತ್ತು ಸಾವಿರ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಜ್ವಲ್, ಅಶ್ವತ್, ರಾಕೇಶ್, ಮನೋಜ್, ಶ್ರೀನಿವಾಸ್ ಉಪಸ್ಥಿತರಿದ್ದು ವಂಚನಾ ಜಾಲದ ಬಗ್ಗೆ ಕಣ್ಣೀರಿನೊಂದಿಗೆ ಮಾಹಿತಿ ನೀಡಿದರು.