ನವದೆಹಲಿ:ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಳಕೆಯಲ್ಲಿ ಹೆಚ್ಚಳವಾಗಿದ್ದು, 2026-27ರ ವೇಳೆಗೆ 13% ಪಾಲು ಹೆಚ್ಚಳವಾಗಲಿದೆ ಎಂದು ಜೆಫರೀಸ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಜೆಫರೀಸ್ ಸಂಸ್ಥೆ ವಿಶ್ವದ ಪ್ರಮುಖ ಹೂಡಿಕೆ ಮತ್ತು ಬಂಡವಾಳ ಮಾರುಕಟ್ಟೆ ಸಂಸ್ಥೆಗಳಲ್ಲಿ ಒಂದಾಗಿದೆ.
2024ರ ಮಾರ್ಚ್ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು 5% ದಷ್ಟಿತ್ತು. 2020-21ರಲ್ಲಿ ಇಲೆಕ್ಟಿಕ್ ದ್ವಿಚಕ್ರ ವಾಹನಗಳ ಮಾರಾಟದ ಪಾಲು ಕೇವಲ 0.4% ರಷ್ಟು ಹೆಚ್ಚಳವಾಗಿತ್ತು. ಇದು 2023ರ ಆರಂಭದಲ್ಲಿ 5.4%ಕ್ಕೆ ಏರಿಕೆಯಾಗಿದೆ. ಸಬ್ಸಿಡಿಗಳು, ತೆರಿಗೆ ವಿನಾಯಿತಿ ಮತ್ತು ಹೊಸ ಲಾಂಚ್ ಗಳಿಂದ ಈ ಹೆಚ್ಚಳಗಳು ಉಂಟಾಗಿದೆ.
ಎಲೆಕ್ಟ್ರಿಕ್ ವಾಹನಗಳಲ್ಲಿ ನಾವು ಪ್ರಸ್ತುತ 2025-26-27ಹಣಕಾಸು ವರ್ಷಗಳಲ್ಲಿ ಕ್ರಮವಾಗಿ 7% , 10% ಮತ್ತು 13% ಹೆಚ್ಚಳವನ್ನು ನಿರೀಕ್ಷಿಸುತ್ತೇವೆ ಎಂದು ಜೆಫರೀಸ್ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ಓಲಾ ಎಲೆಕ್ಟ್ರಿಕ್, ಇತ್ತೀಚೆಗೆ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಪ್ರಬಲ ತಯಾರಕರಾಗಿ ಹೊರಹೊಮ್ಮಿದೆ. 2022-23ರಲ್ಲಿ ಓಲಾ ಎಲೆಕ್ಟ್ರಿಕ್ ಮಾರುಕಟ್ಟೆ ಪಾಲು 21% ವಿದ್ದು, 2023-24ರಲ್ಲಿ 35% ಮತ್ತು -2024-25ರಲ್ಲಿ 49%ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜೆಫರೀಸ್ ವರದಿಯ ಪ್ರಕಾರ, ಓಲಾ ಮಾರುಕಟ್ಟೆ ಪಾಲು ಆಗಸ್ಟ್ ನಲ್ಲಿ 31% ಮತ್ತು ಸೆಪ್ಟೆಂಬರ್ನಲ್ಲಿ ಇಂದಿನವರೆಗೆ 29%ಕ್ಕೆ ಕುಸಿದಿದೆ ಮತ್ತು ಬಜಾಜ್, ಟಿವಿಎಸ್ ಮತ್ತು ಅಥರ್ ಜೂನ್ ತ್ರೈಮಾಸಿಕದಿಂದ ತಲಾ 5-9 ಶೇಕಡಾ ಪಾಯಿಂಟ್ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ.
ಈ ವಾರ, ಕೇಂದ್ರ ಸಚಿವ ಸಂಪುಟ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಎರಡು ವರ್ಷಗಳಲ್ಲಿ 10,900 ಕೋಟಿ ವೆಚ್ಚದ ಗುರಿ ಹೊಂದಿದೆ. ಬೃಹತ್ ಕೈಗಾರಿಕೆಗಳ ಸಚಿವಾಲಯದ ಪ್ರಸ್ತಾವನೆಗೆ ಆಧರಿಸಿ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ಕೊಡುವ ಸಲುವಾಗಿ ಸರ್ಕಾರ ಪಿಎಂ ಇ-ಡ್ರೈವ್ ಸಬ್ಸಿಡಿ ಸ್ಕೀಮ್ ಅನ್ನು ಆರಂಭಿಸಿದೆ. ಅದರಂತೆ ಎಲೆಕ್ಟ್ರಿಕ್ ವಾಹನಗಳಿಗೆ 50,000ರೂ.ವರೆಗೆ ಸಬ್ಸಿಡಿ ಸಿಗಲಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ ಸಬ್ಸಿಡಿ ಸಿಗಲಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ 50,000 ರೂ ಸಬ್ಸಿಡಿ ಸಿಗಲಿದೆ. ಇದಲ್ಲದೆ ತೈಲ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡಿದ್ದು, ಕರ್ನಾಟಕ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 2020-21ನೇ ಸಾಲಿನಿಂದ 2023-2024ರ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಮಾಣ ಶೇ.1,275ರಷ್ಟು ವೃದ್ಧಿಯಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿ ಮತ್ತು ನೋಂದಣಿಯಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಕರ್ನಾಟಕವು ನಂತರದ ಸ್ಥಾನದಲ್ಲಿದೆ. 2017-18ರಲ್ಲಿ ರಾಜ್ಯದಲ್ಲಿ ಕೇವಲ 1,922 ಎಲೆಕ್ಟ್ರಿಕ್ ವಾಹನಗಳು. ನೋಂದಣಿಯಾಗಿದ್ದವು. 2023-24ರಲ್ಲಿ ಮಾರ್ಚ್ ಅಂತ್ಯಕ್ಕೆ ಒಂದೇ ವರ್ಷದಲ್ಲಿ 1,59,428 ವಾಹನಗಳು ನೋಂದಣಿಯಾಗಿವೆ. ಇವುಗಳಲ್ಲಿ 1,40,327 ದ್ವಿಚಕ್ರ ವಾಹನಗಳು, 13,667 ಕಾರುಗಳು, 5,434 ತ್ರಿಚಕ್ರ ವಾಹನಗಳು ಸೇರಿವೆ.