ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಶಿಕ್ಷಣ ಸಚಿವೆ ಆತಿಶಿ ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರ್ಕಾರ ಶಿಕ್ಷಣ ಕ್ರಾಂತಿಯನ್ನು ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ ದೆಹಲಿ ರಾಜ್ಯ ಶಿಕ್ಷಕರ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಆತಿಶಿ, 'ಸಚಿವರು, ಅಧಿಕಾರಿಗಳಿಗಿಂತ ಮಿಗಿಲಾಗಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಉನ್ನತ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ. ಕೇಜ್ರಿವಾಲ್ ಸರ್ಕಾರ ಮಾತ್ರ ಈ ರೀತಿ ಮಾಡಿದೆ' ಎಂದು ಅವರು ಹೇಳಿದ್ದಾರೆ.
'ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 400ಕ್ಕೂ ಹೆಚ್ಚು ಪ್ರಾಂಶುಪಾಲರು ಹಾಗೂ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಸಿಂಗಪುರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ 950 ಶಿಕ್ಷಕರು ಮತ್ತು ಐಐಎಂ ಅಹಮದಾಬಾದ್‌ನಲ್ಲಿ 1,700 ಶಿಕ್ಷಕರು ತರಬೇತಿ ಪಡೆದಿದ್ದಾರೆ' ಎಂದು ಅವರು ಉಲ್ಲೇಖಿಸಿದರು.
'ನಾನು ಈ ವೃತ್ತಿಯೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನ ತಂದೆ ಹಾಗೂ ತಾಯಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿದ್ದರು. ಗುಣಮಟ್ಟದ ಶಿಕ್ಷಣದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕರನ್ನು ಗೌರವಿಸುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. ಮುಂದಿನ ಪೀಳಿಗೆಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು.