ನವದೆಹಲಿ: ಮಣಿಪುರದಲ್ಲಿ ಶಾಶ್ವತ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮೈತೇಯಿ ಮತ್ತು ಕುಕಿ ಎರಡೂ ಸಮುದಾಯಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಒಳನುಸುಳುವಿಕೆಯನ್ನು ಪರಿಶೀಲಿಸಲು ಮ್ಯಾನ್ಮಾರ್‌ನೊಂದಿಗಿನ ದೇಶದ ಗಡಿಯಲ್ಲಿ ಬೇಲಿ ಹಾಕಲು ಪ್ರಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಮೋದಿ 3.0 ಸರ್ಕಾರದ 100 ದಿನಗಳ ಸಾಧನೆ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ ವಾರ ಮೂರು ದಿನಗಳ ಹಿಂಸಾಚಾರವನ್ನು ಹೊರತುಪಡಿಸಿ, ಮಣಿಪುರದಲ್ಲಿ ಒಟ್ಟಾರೆ ಪರಿಸ್ಥಿತಿ ಶಾಂತವಾಗಿದೆ ಮತ್ತು ಸರ್ಕಾರವು ಪ್ರಕ್ಷುಬ್ಧ ಈಶಾನ್ಯ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎರಡೂ ಸಮುದಾಯಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಮಣಿಪುರದಲ್ಲಿ ಶಾಶ್ವತ ಶಾಂತಿ ನೆಲೆಸಲು ಮಾರ್ಗಸೂಚಿಯನ್ನೂ ಸಿದ್ಧಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮ್ಯಾನ್ಮಾರ್‌ನೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿ 30 ಕಿಮೀ ಬೇಲಿ ನಿರ್ಮಿಸಲಾಗಿದೆ ಮತ್ತು ಒಟ್ಟು 1,500 ಕಿಮೀಗೆ ಬೇಲಿ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಮತ್ತು ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಭಾರತ-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿ ವಾಸಿಸುವ ಜನ ಯಾವುದೇ ದಾಖಲೆಗಳಿಲ್ಲದೆ ಪರಸ್ಪರರ ಪ್ರದೇಶಕ್ಕೆ ಪ್ರವೇಶಿಸುವ ಭಾರತ-ಮ್ಯಾನ್ಮಾರ್ ಮುಕ್ತ ಸಂಚಾರವನ್ನು ಸರ್ಕಾರ ಈಗಾಗಲೇ ರದ್ದುಗೊಳಿಸಿದೆ ಎಂದು ಅವರು ಹೇಳಿದರು.