ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಪೋಪ್ ಫ್ರಾನ್ಸಿಸ್ ಬೇಸರ ಹೊರಹಾಕಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲಕ್ಷಾಂತರ ವಲಸಿಗರನ್ನು ಗಡೀಪಾರು ಮಾಡುವ ಯೋಜನೆ ರೂಪಿಸಿದ್ದಾರೆ.
ಸಿಂಗಪುರದಿಂದ ರೋಮ್‌ಗೆ ಪ್ರಯಾಣಿಸುವ ವೇಳೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟ್ರಂಪ್ ಅವರ ವಲಸಿಗರನ್ನು ಗಡೀಪಾರು ಮಾಡಬೇಕೆಂಬ ಯೋಚನೆ 'ಘೋರ ಪಾಪ' ಎಂದು ಕರೆದಿದ್ದಾರೆ. ಇತ್ತ ಕಮಲಾ ಹ್ಯಾರಿಸ್ ಅವರು ಗರ್ಭಪಾತದ ಹಕ್ಕುಗಳನ್ನು ಬೆಂಬಲಿಸುವುದು 'ಹತ್ಯೆ'ಗೆ ಸಮ ಎಂದು ಹೋಲಿಸಿದ್ದಾರೆ.
ಅಮೆರಿಕದ ಕ್ಯಾಥೋಲಿಕರು ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 'ಕಡಿಮೆ ದುಷ್ಟ'ರಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ವಲಸಿಗರನ್ನು ಓಡಿಸುವವರು ಅಥವಾ ಮಕ್ಕಳನ್ನು ಕೊಲ್ಲುವವರು ನಿಲುವು ಜೀವನಕ್ಕೆ ವಿರುದ್ಧವಾಗಿದೆ ಎಂದು ಅವರು ವಿವರಿಸಿದ್ದಾರೆ.
'ಮತದಾನ ಮಾಡದಿರುವುದು ಒಳ್ಳೆಯ ಪ್ರವೃತ್ತಿಯಲ್ಲ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಆದರೆ, ನೀವು 'ಕಡಿಮೆ ದುಷ್ಟ'ರನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರು ಕಡಿಮೆ ದುಷ್ಟರು? ಎಂಬುದು ನನಗೆ ಗೊತ್ತಿಲ್ಲ. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬೇಕು' ಎಂದು ಕ್ಯಾಥೋಲಿಕರಿಗೆ ಪೋಪ್ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅಮೆರಿಕದಲ್ಲಿ 52 ಲಕ್ಷ ಕ್ಯಾಥೋಲಿಕರು ಇದ್ದಾರೆ. ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಸೇರಿದಂತೆ ಹಲವೆಡೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಶೇ 20ಕ್ಕಿಂತ ಹೆಚ್ಚು ವಯಸ್ಕರು ಮತದಾರರು ಕ್ಯಾಥೋಲಿಕರು ಆಗಿದ್ದಾರೆ.
ಅಮೆರಿಕದ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಾದ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಈಚೆಗೆ ಮುಖಾಮುಖಿಯಾಗಿದ್ದರು. ಪರಸ್ಪರ ಹಸ್ತಲಾಘವದೊಂದಿಗೆ ಶುರುವಾದ ಚರ್ಚೆ, ಒಂದೂವರೆ ಗಂಟೆ ನಡೆದಿತ್ತು. ಪರಸ್ಪರ ನಿಂದನೆ ಹಾಗೂ ತುರುಸಿನ ವಾದಗಳ ಮೂಲಕ ಅಂತ್ಯಗೊಂಡಿತ್ತು.
ದೇಶದ ಗಡಿ ರಕ್ಷಣೆ, ವಿದೇಶಾಂಗ ನೀತಿ, ಆರ್ಥಿಕತೆ, ಗರ್ಭಪಾತ ನೀತಿ ಸೇರಿ ಅಧಿಕಾರ ದೊರೆತರೆ ಜಾರಿಗೆ ತರಲು ಇಚ್ಛಿಸುವ ಕ್ರಮಗಳು ಹಾಗೂ ಪ್ರಮುಖ ವಿಷಯಗಳನ್ನು ಕುರಿತು ತಮ್ಮ ತಮ್ಮ ನಿಲುವನ್ನು ಜನರ ಮುಂದಿಟ್ಟಿದ್ದರು.