ಕಾಸರಗೋಡು: ಕೊಚ್ಚುವೇಳಿ-ಮಂಗಳೂರು ಜಂಕ್ಷನ್ ವಿಶೇಷ ರೈಲನ್ನು ಸೆ.28ರ ವರೆಗೆ ವಿಸ್ತರಿಸಲಾಗಿದ್ದು, ಜನದಟ್ಟಣೆಯನ್ನು ಪರಿಗಣಿಸಿ ದೈನಂದಿನ ಸೇವೆಯಾಗಿ ಸಂಚಾರ ನಡೆಸಬೇಕು ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸಕ್ತ ವಾರದಲ್ಲಿ 2 ದಿನ ಮಾತ್ರ ಈ ವಿಶೇಷ ರೈಲು ಸಂಚಾರ ನಡೆಸಲಾಗುತ್ತಿದೆ. ಗುರುವಾರ ಮತ್ತು ಶನಿವಾರ ಮಂಗಳೂರು ಜಂಕ್ಷನ್‍ನಿಂದ ಕೊಚ್ಚುವೇಳಿಗೆ, ಶುಕ್ರವಾರ ಮತ್ತು ಭಾನುವಾರದಂದು ಕೊಚುವೇಳಿಯಿಂದ ಮಂಗಳೂರಿಗೆ ಸಂಚಾರ ನಡೆಸುತ್ತಿರುವ ರೈಲಿನಲ್ಲಿ 8 ಸ್ಲೀಪರ್ ಕೋಚ್‍ಗಳು ಮತ್ತು 8 ಜನರಲ್ ಕೋಚ್‍ಗಳಿವೆ. ಮಲಬಾರ್ ಎಕ್ಸ್‍ಪ್ರೆಸ್ ಸಂಜೆ 6.15 ಕ್ಕೆ ತಿರುವನಂತಪುರಕ್ಕೆ ತೆರಳಿದ ನಂತರ ಬೇರೆ ಯಾವುದೇ ರೈಲುಗಳ ಓಡಾಟವಿಲ್ಲ. ಓಣಂ ಆಗಿರುವುದರಿಂದ ತಿರುವನಂತಪುರಂ ಎಕ್ಸ್‍ಪ್ರೆಸ್, ಮಾವೇಲಿ ಎಕ್ಸ್‍ಪ್ರೆಸ್, ಮಲಬಾರ್ ಎಕ್ಸ್‍ಪ್ರೆಸ್‍ರೈಲುಗಳಲ್ಲಿ ಕಾಯ್ದಿರಿಸುವ ಸೀಟುಗಳು ಲಭ್ಯವಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಮಾರ್ಗವಾಗಿ ಸಂಚರಿಸಲು ರೈಲು ಪ್ರಯಾಣದ ಎರಡು ಪಟ್ಟು ಸಮಯ ತಗಲುತ್ತಿದೆ. ಈ ರೈಲು ಸೇವೆಯನ್ನು ಮುಂದುವರಿಸಿದರೆ ರೈಲ್ವೆ ಸಚಿವಾಲಯಕ್ಕೆ ಲಾಭದಾಯಕವಾಗಿದ್ದು, ಮಲಬಾರ್ ಪ್ರದೇಶದಲ್ಲಿ ರಾತ್ರಿ ಪ್ರಯಾಣದ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ ಎಂದು ಅಶ್ವಿನಿ ಎಂ.ಎಲ್. ಮನವಿಯಲ್ಲಿ ಸೂಚಿಸಿದ್ದಾರೆ.