ಕಾಸರಗೋಡು: ಮಲ್ಲದಲ್ಲಿ ಮಾನಸಿಕ ಅನಾರೋಗ್ಯ ಹೊಂದಿದ್ದ ಪರಿಶಿಷ್ಟ ಜಾತಿ ಯುವಕ ಅನಿಲ್ ಕುಮಾರ್ ಎಂಬವರಿಗೆ ಅಮಾನುಷವಾಗಿ ಥಳಿಸಿ ಗಾಯಗೊಳಿಸಿದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವುದರ ಜತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ.ಜಾತಿ-ಪ.ವರ್ಗ ಜಂಟಿ ಸಂಘಟನೆಗಳ ವತಿಯಿಂದ ಸೆ. 13ರಂದು ಎಸ್.ಎಂ.ಎಸ್ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಸ್.ಸಿ-ಎಸ್‍ಟಿ ಅಲ್ ಇಂಡಿಯ ಕಾನ್‍ಫೆಡರೇಶನ್ ಕಾಸರಗೋಡು ಜಿಲ್ಲಾಧ್ಯಕ್ಷ ಐ. ಲಕ್ಷ್ಮಣ ಪೆರಿಯಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಲ್ಲದಲ್ಲಿ ಯುವಕನನ್ನು ಆ. 24ರಂದು ಥಳಿಸಲಾಗಿದ್ದು, ಈ ಬಗ್ಗೆ ಆದೂರು ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಆದರೆ, ಯುವಕನ ಮೇಲೆ ಗಂಭೀರ ಹಲ್ಲೆ ನಡೆಸಿದವರ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಕೆಸು ದಾಖಲಿಸದೆ, ಆರೋಪಿಗಳಿಗೆ ಜಾಮೀನು ಲಭಿಸುವ ರೀತಿಯಲ್ಲಿ ಪ್ರಕರಣವನ್ನು ಕ್ಷುಲ್ಲಕವಾಗಿ ಪರಿಗಣಿಸಿ ಸಾಮಾನ್ಯ ಕೇಸು ದಾಖಲಿಸಲಾಗಿದೆ.
ಎಸ್‍ಸಿ-ಎಸ್‍ಟಿ ಸಂರಕ್ಷಣೆಗಾಗಿ ರಚಿಸಲಾಗಿರುವ ಎಸ್.ಎಂ.ಎಸ್ ಅಧಿಕಾರಿಗಳೂ ಯುವಕನ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಗಳ ಪರ ನಿಂತಿರುವುದು ಖಂಡನೀಯ. ಎಸ್‍ಎಂಎಸ್ ಕಚೇರಿ ಆರೋಪಿಗಳನ್ನು ಸಂರಕ್ಷಿಸುವ ಕಚೇರಿಯಾಗಿ ಬದಲಾಗಿದೆ. ಅನಿಲ್‍ಕುಮಾರ್ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಪೊಲೀಸರ ಧೋರಣೆ, ಸಮುದಾಯದ ವಿರುದ್ಧ ದೌರ್ಜನ್ಯಕ್ಕೆ ಪ್ರೇರಣೆ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್.ಸಿ-ಎಸ್‍ಟಿ ಅಲ್ ಇಂಡಿಯ ಕಾನ್‍ಫೆಡರೇಶನ್ ರಾಜ್ಯಾಧ್ಯಕ್ಷ ಬಾಬು ಎನ್, ಹರಿರಾಮ್ ಕುಳೂರು, ಮೊಗೇರ ಸಂಘದ ಪದಾದಿಕಾರಿಗಳಾದ ರಾಮಪ್ಪ ಮಂಜೇಶ್ವರ, ರಮೇಶ್ ಮಧೂರು, ದಲಿತ್ ಲೀಗಿನ ರಾಜು ವಿದ್ಯಾನಗರ ಉಪಸ್ಥಿತರಿದ್ದರು.