ಉಪ್ಪಳ: ಉಪ್ಪಳ ಪತ್ವಾಡಿ ಸನಿಹ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಭಾರಿ ಪ್ರಮಾಣದ ಮಾರಕ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಮಾರಾಟಕ್ಕಾಗಿ ದಾಸ್ತಾನಿರಿಸಲಾಗಿದ್ದ ಎಂಡಿಎಂಎ, ಗಾಂಜಾ ಸೇರಿದಂತೆ ವಿವಿಧ ಮಾದರಿಯ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲಿಕ ಅಸ್ಗರ್‍ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯನ್ವಯ ಬೇಕಲ ಡಿವೈಎಸ್‍ಪಿ ಕೆ. ಮನೋಜ್ ನೇತೃತ್ವದಲ್ಲಿ ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ಹಾಗೂ ಪೊಲೀಸರ ತಂಡ ದಾಳಿ ನಡೆಸಿದೆ. ಆ. 30ರಂದು ಮೇಲ್ಪರಂಬದಿಂದ ಅಬ್ದುಲ್ ರಹಮಾನ್ ಎಂಬಾತನನ್ನು ಬಂಧಿಸಿ ಈತನಿಂದ 49.33ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಈತ ನೀಡಿದ ಮಾಹಿತಿಯನ್ವಯ ಶುಕ್ರವಾರ ದಾಳಿ ನಡೆಸಲಾಗಿದೆ. ಮೂರು ಕಿಲೋ ಎಂಡಿಎಂಎ, ಒಂದು ಕಿಲೋ ಗಾಂಜಾ, ಮಾದಕ ಮಾತ್ರೆಗಳು, ಒಂದು ಕೊಲೋ ಪೇಸ್ಟ್ ರೂಪದಲ್ಲಿರುವ ಮಾದಕ ವಸ್ತುವನ್ನೂ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾದಕ ವಸ್ತುವಿನ ಮೌಲ್ಯ ಸುಮಾರು ಮೂರು ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕವಸ್ತು ಕಪಿಮುಷ್ಠಿಯಲ್ಲಿ ಜಿಲ್ಲೆ:
ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಮಾದಕವಸ್ತು ಸಾಗಾಟ ಹಾಗೂ ಮಾರಾಟ ಪ್ರಕರಣ ಗಣನೀಯವಾಗಿ ಹೆಚ್ಚಾಗಿದ್ದು, ನಿರಂತರ ನಡೆಯುತ್ತಿರುವ ದಾಳಿಯಿಂದ ವಶಪಡಿಸಿಕೊಳ್ಳುತ್ತಿರುವ ಮಾದಕದ್ರವ್ಯದ ಪ್ರಮಾಣ ಇದಕ್ಕೆ ಪುಷ್ಠಿ ನೀಡುತ್ತಿದೆ. ಮಾರಕ ಎಂಡಿಎಂಎ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಕೇಂದ್ರೀಕರಿಸಿ ಮಾರಾಟ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.